ಜಿಎಸ್‌ಟಿ : ದುಬಾರಿಯಾಗಲಿದೆ ಬ್ಯಾಂಕಿಂಗ್, ವಿಮಾ ವ್ಯವಹಾರ

ಹೊಸದಿಲ್ಲಿ, ಜೂ.28: ಜುಲೈ 1ರಿಂದ ದೇಶಾದ್ಯಂತ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ , ಬಹುತೇಕ ಸರಕು ಮತ್ತು ಸೇವೆಗಳ ತೆರಿಗೆ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗದು ಎಂದು ಸರಕಾರ ಹೇಳುತ್ತಿದೆ. ಆದರೆ , ವಿವಿಧ ಕ್ಷೇತ್ರಗಳಿಂದ ಬಂದಿರುವ ವರದಿಗಳು ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ವ್ಯಕ್ತಪಡಿಸಿವೆ.
ಇದರಲ್ಲಿ ಪ್ರಮುಖವಾದುದೆಂದರೆ ಬ್ಯಾಂಕಿಂಗ್ ಮತ್ತು ವಿಮಾ ಸಂಸ್ಥೆಗಳು ಸಲ್ಲಿಸುವ ಸೇವೆಗಳು. ಜಿಎಸ್‌ಟಿ ಅಡಿಯಲ್ಲಿ ಈ ಸೇವೆಗಳು ಗ್ರಾಹಕರಿಗೆ ದುಬಾರಿಯಾಗಲಿವೆ ಎನ್ನಲಾಗುತ್ತಿದೆ. ಎಟಿಎಂ ವ್ಯವಹಾರಕ್ಕೆ ಶುಲ್ಕ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆಗೆ ಶುಲ್ಕ, ಇಎಂಐ, ವಿಮಾ ಕಂತು ಪಾವತಿಗೆ ಕೂಡಾ ಸೇವಾ ಶುಲ್ಕ ವಿಧಿಸಲಾಗುವುದು . ಜಿಎಸ್‌ಟಿಯಲ್ಲಿ ಆರ್ಥಿಕ ಸೇವೆಗಳನ್ನು ಶೇ.18ರ ಶ್ರೇಣಿಯಲ್ಲಿ ಇರಿಸಲಾಗಿದೆ. ಆದರೆ ಈಗ ಆರ್ಥಿಕ ಸೇವೆಗಳಿಗೆ ವಿಧಿಸಲಾಗುತ್ತಿರುವ ತೆರಿಗೆ ಶೇ.15.
ಇದೇ ರೀತಿ ಎಸ್‌ಬಿಐ(ಸ್ಟೇಟ್ ಬ್ಯಾಂಕ್) , ನಾಲ್ಕು ಉಚಿತ ವ್ಯವಹಾರದ ಬಳಿಕ ನಡೆಸಲಾಗುವ ಪ್ರತಿಯೊಂದು ವ್ಯವಹಾರಕ್ಕೂ 50 ರೂಪಾಯಿ ಶುಲ್ಕ, ಜೊತೆಗೆ ಶೇ.15 ಸೇವಾ ತೆರಿಗೆ ವಿಧಿಸುತ್ತಿದೆ.
ಬ್ಯಾಂಕ್‌ಗಳು ಮತ್ತು ವಿಮಾ ಸಂಸ್ಥೆಗಳು ಸೇವಾ ಶುಲ್ಕ ಹೆಚ್ಚಳವಾಗುವ ಬಗ್ಗೆ ಗ್ರಾಹಕರಿಗೆ ಎಸ್‌ಎಂಎಸ್ ಸಂದೇಶ ಕಳುಹಿಸುತ್ತಿವೆ. ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಷೂರೆನ್ಸ್ ಸಂಸ್ಥೆಗಳೂ ಈ ಕುರಿತು ಗ್ರಾಹಕರಿಗೆ ಸಂದೇಶ ರವಾನಿಸಿವೆ.
ಸ್ವಾತಂತ್ರ ದೊರೆತ ಬಳಿಕ ದೇಶದಲ್ಲಿ ನಡೆದ ಬೃಹತ್ ತೆರಿಗೆ ಸುಧಾರಣೆ ಪ್ರಕ್ರಿಯೆ ಎಂದು ಕರೆಯಲಾಗುತ್ತಿರುವ ಜಿಎಸ್‌ಟಿ ದೇಶದ ಜಿಡಿಪಿಗೆ ಶೇ.2ರಷ್ಟು ಕೊಡುಗೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.







