ಧರ್ಮ ಗುರುಗಳಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ ಇನ್ಸ್ ಪೆಕ್ಟರ್ ವಿರುದ್ಧ ಕ್ರಮಕ್ಕೆ ಮನವಿ
.jpg)
ಸಾಗರ, ಜೂ.29: ನಗರದ ಜಾಮಿಯಾ ಮಸೀದಿ ಧರ್ಮಗುರುಗಳಾಗಿರುವ ಅಲೆ ಮುಸ್ತಫ ಅವರನ್ನು ಬೆದರಿಸಿ, ಒತ್ತಾಯಪೂರ್ವಕವಾಗಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕುವಂತೆ ಪ್ರೇರೇಪಿಸಿರುವ ನಗರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಲ್.ಜನಾರ್ಧನ್ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ಜಾಮಿಯಾ ಮಸೀದಿಯ ಸುನ್ನಿ ಸೂಫಿ ಬರೇಲ್ವಿ ಪಂಥದ ವತಿಯಿಂದ ಡಿ.ವೈ.ಎಸ್.ಪಿ.ಯವರಿಗೆ ಮನವಿ ಸಲ್ಲಿಸಲಾಯಿತು.
ಜೂ. 28ರಂದು ಸಂಜೆ 7-30ಕ್ಕೆ ಜಾಮಿಯಾ ಮಸೀದಿ ಧರ್ಮಗುರುಗಳಾದ ಅಲೇ ಮುಸ್ತಫ ಅವರನ್ನು ನಗರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಲ್.ಜನಾರ್ಧನ್ ಅವರು ಆಜಾದ್ ಮಸೀದಿಯವರ ಕುಮ್ಮಕ್ಕಿನಿಂದ ಬೆದರಿಸಿದ್ದಾರೆ. ಧರ್ಮಗುರುಗಳಾದ ಅಲೇ ಮುಸ್ತಫಾ ಅವರಿಗೆ ರಾಜಿನಾಮೆ ಪತ್ರಕ್ಕೆ ಸಹಿ ಹಾಕುವಂತೆ ಒತ್ತಡ ಹೇರಿದ್ದಾರೆ. ಗುರುಗಳು ಇದನ್ನು ನಿರಾಕರಿಸಿದಾಗ ನೀನು ಪತ್ರಕ್ಕೆ ಸಹಿ ಹಾಕದೇ ಇದ್ದರೆ ನಿನ್ನ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜೈಲಿಗೆ ಕಳಿಸುವ ಬೆದರಿಕೆ ಒಡ್ಡಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಇದರಿಂದ ಹೆದರಿಕೊಂಡ ಧರ್ಮಗುರುಗಳು ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ್ದಾರೆ. ನಗರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಮಸೀದಿಯ ಧರ್ಮಗುರುಗಳನ್ನು ಓರ್ವ ಅಪರಾಧಿಯಂತೆ ನಡೆಸಿಕೊಂಡು, ಪೊಲೀಸ್ ಜೀಪಿನಲ್ಲಿ ಕೂರಿಸಿಕೊಂಡು ಮನೆಗೆ ತಂದು ಬಿಟ್ಟಿದ್ದಾರೆ. ಇದರಿಂದ ಧರ್ಮಗುರುಗಳು ಮಾನಸಿಕವಾಗಿ ತೀವ್ರ ನೊಂದಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸೈಯದ್ ಜಾಕೀರ್, ಜಮೀಲ್ ರಜ್ವಿ, ನಾಸೀರ್ ಬೇಗ್, ಅನೀಸ್ ರಜ್ವಿ, ಸೈಯದ್ ಸಾದಿಕ್, ಸಮೀರ್, ಮಕ್ಬೂಲ್, ಭಾಷಾ ರಜ್ವಿ, ಸೈಯದ್ ಇರ್ಫಾನ್, ರಫೀಕ್ ರಜ್ವಿ ಇನ್ನಿತರರು ಹಾಜರಿದ್ದರು.
ಪ್ರತಿಕ್ರಿಯೆ : ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ತಾಲ್ಲೂಕು ಮುಸ್ಲಿಂ ಸಮಾಜದ ಅಧ್ಯಕ್ಷ ಸಯ್ಯದ್ ಮುನವ್ವರ್ 'ಸರ್ಕಲ್ ಇನ್ಸ್ ಪೆಕ್ಟರ್ ಜನಾರ್ಧನ್ ಓರ್ವ ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ. ಧರ್ಮಗುರುಗುಳಿಗೆ ಅವಮಾನ ಆಗುವ ರೀತಿ ಯಾರೂ ನಡೆದುಕೊಂಡಿಲ್ಲ. ಇವರ ಮೇಲೆ ಮಾಡಿರುವ ಆರೋಪ ಶುದ್ಧ ಸುಳ್ಳು ಎಂದರು.
ಜಾಮಿಯಾ ಮಸೀದಿಯ ಧರ್ಮಗುರುಗಳು ಇಲ್ಲಿಗೆ ಬಂದು ಒಂದೂವರೆ ವರ್ಷ ಕಳೆದಿದೆ. ಅವರು ಬಂದಾಗಿನಿಂದ ಇಲ್ಲಿಯವರೆಗೂ ಪ್ರಚೋದನಾಕಾರಿ ಭಾಷಣ ಮಾಡುತ್ತಾ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ರಾಜೀನಾಮೆ ನೀಡಲು ಹೇಳಿದ್ದೆವು. ಅವರೇ ಸ್ವತಃ ಬಂದು ರಾಜಿನಾಮೆ ನಿಡಿದ್ದಾರೆ. ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.







