ಕೆ.ಎಸ್.ಈಶ್ವರಪ್ಪರ ಭಾಷಣಕ್ಕೆ ಅಡ್ಡಿಪಡಿಸಿದ ಶಾಸಕರ ಬೆಂಬಲಿಗರು
ಸಮಾರಂಭದಿಂದ ನಿಗರ್ಮಿಸುವಾಗಲೂ ಜೈಕಾರದ ಕೂಗು!!
ಶಿವಮೊಗ್ಗ, ಜೂ. 29: ಒಂದೆಡೆ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ರವರು ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ವಿರುದ್ದ ಅವಕಾಶ ಸಿಕ್ಕಾಗಲೆಲ್ಲ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಇನ್ನೊಂದೆಡೆ ಕೆ.ಎಸ್.ಈಶ್ವರಪ್ಪರವರು ಶಾಸಕರ ಈ ಟೀಕೆಗಳಿಗೆ ಉತ್ತರ ನೀಡುವ ಗೋಜಿಗೆ ಹೋಗದೆ, ತಮ್ಮ ಬೆಂಬಲಿಗರ ಮೂಲಕ ತಿರುಗೇಟು ನೀಡುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಗುರುವಾರ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಆವರಣದಲ್ಲಿ ನಡೆದ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಈ ಇಬ್ಬರು ನಾಯಕರ ನಡುವಿನ ರಾಜಕೀಯ ಭಿನ್ನಾಭಿಪ್ರಾಯದ ಜ್ವಾಲೆಗೆ ಬೆಂಬಲಿಗರು ತುಪ್ಪ ಸುರಿಯುವ ಕೆಲಸ ಮಾಡಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಬೆಂಬಲಿಗರು, ಶಾಸಕರ ಪರವಾಗಿ ನಿರಂತರವಾಗಿ ’ಜೈಕಾರ’ ಕೂಗುವ ಮೂಲಕ ಕೆ.ಎಸ್.ಈಶ್ವರಪ್ಪರ ಭಾಷಣಕ್ಕೆ ಅಡ್ಡಿಪಡಿಸಿ, ತೀವ್ರ ಕಿರಿಕಿರಿ ಉಂಟು ಮಾಡಿದ ಘಟನೆ ನಡೆಯಿತು. ಸಮಾರಂಭದ ಆರಂಭದಿಂದ ಅಂತ್ಯದವರೆಗೂ ಜೈಕಾರದ ಘೋಷಣೆ ಮೊಳಗಿಸಿದ ಬೆಂಬಲಿಗರು, ಕೆ.ಎಸ್.ಈಶ್ವರಪ್ಪ ಸಮಾರಂಭದಿಂದ ನಿಗರ್ಮಿಸುವಾಗಲೂ ಘೋಷಣೆ ಕೂಗಿದ್ದು ಕಂಡುಬಂದಿತು.
ಮಾತು ನಿಲ್ಲಿಸಿದರು!: ಸಮಾರಂಭದಲ್ಲಿದ್ದ ಅತಿಥಿಗಳನ್ನು ಸ್ವಾಗತಕಾರರು ಆಹ್ವಾನಿಸುವ ವೇಳೆ ಪ್ರಸನ್ನಕುಮಾರ್ ಹೆಸರೇಳುತ್ತಿದ್ದಂತೆ ಅವರ ಪರವಾಗಿ ಬೆಂಬಲಿಗರು ಜೈಕಾರ ಕೂಗಲಾರಂಭಿಸಿದರು. ಕೆ.ಎಸ್.ಈಶ್ವರಪ್ಪ ಹೆಸರೇಳಿದಾಗ ಅವರ ಕಡೆಯ ಬೆರಳೆಣಿಕೆಯಷ್ಟಿದ್ದ ಬೆಂಬಲಿಗರು ಕೂಡ ಅವರ ಪರವಾಗಿ ಜೈಕಾರ ಕೂಗಿದರು. ಬೇರೊಂದು ಕಾರ್ಯಕ್ರಮಕ್ಕೆ ತೆರಳಬೇಕೆಂಬ ಕಾರಣದಿಂದ ಕೆ.ಎಸ್.ಈಶ್ವರಪ್ಪರವರು ಕಾರ್ಯಕ್ರಮ ಉದ್ಘಾಟನೆಯಾದ ನಂತರ ಸಚಿವ ರಾಮಲಿಂಗಾರೆಡ್ಡಿಯವರಿಗಿಂತ ಮುಂಚಿತವಾಗಿಯೇ ಭಾಷಣ ಮಾಡಲು ಮುಂದಾದರು.
ಅವರು ಮೈಕ್ ಬಳಿ ಆಗಮಿಸುತ್ತಿದ್ದಂತೆ ಶಾಸಕರ ಪರವಾಗಿ ಬೆಂಬಲಿಗರು ನಿರಂತರವಾಗಿ ಜೈಕಾರ ಕೂಗಲಾರಂಭಿಸಿದರು. ಒಂದೆರೆಡು ನಿಮಿಷಗಳ ಕಾಲ ಈಶ್ವರಪ್ಪರವರು ಮೈಕ್ ಬಳಿ ಸುಮ್ಮನೆ ನಿಲ್ಲುವಂತಾಯಿತು. ಈ ವೇಳೆ ಸ್ವಾಗತ ಮಾಡುತ್ತಿದ್ದವರು ಮೈಕ್ ಬಳಿ ಆಗಮಿಸಿ ಶಾಂತ ರೀತಿಯಲ್ಲಿ ಸಭೆ ನಡೆಸಿಕೊಡಲು ಅನುವು ಮಾಡಿಕೊಡುವಂತೆ ಮನವಿ ಮಾಡಿಕೊಂಡರು. ಭಾಷಣದಲ್ಲಿ ಈಶ್ವರಪ್ಪರವರು ಶಾಸಕರ ಹೆಸರೇಳುತ್ತಿದ್ದಂತೆ ಮತ್ತೆ ಬೆಂಬಲಿಗರು ಜೈಕಾರ ಕೂಗಲಾರಂಭಿಸಿದರು! ಇದರಿಂದ ಮತ್ತೆ ಅವರು ಕೆಲ ನಿಮಿಷ ಭಾಷಣ ನಿಲ್ಲಿಸುವಂತಾಯಿತು.
ಭಾಷಣ ಮುಕ್ತಾಯಗೊಳಿಸಿ ವೇದಿಕೆಯಿಂದ ಅವರು ನಿಗರ್ಮಿಸುತ್ತಿದ್ದ ವೇಳೆ ಶಾಸಕರ ಬೆಂಬಲಿಗರು ಮತ್ತೆ ಜೈಕಾರ ಕೂಗಿ, ಕೆ.ಎಸ್.ಈಶ್ವರಪ್ಪರನ್ನು ಕೆಣಕುವ ಯತ್ನ ನಡೆಸಿದರು. ಒಂದೆಡೆ ಶಾಸಕರ ಬೆಂಬಲಿಗರು ’ಜೈಕಾರ’ದ ಮೂಲಕ ಇಷ್ಟೆಲ್ಲ ಕಿರಕಿರಿ ಮಾಡಿದರೂ ’ಬಿಜೆಪಿ’ಯ ’ಫೈರ್‌ಬ್ರ್ಯಾಂಡ್’ ಖ್ಯಾತಿಯ ಕೆ.ಎಸ್.ಈಶ್ವರಪ್ಪ ಮಾತ್ರ ತುಟಿಬಿಚ್ಚಲಿಲ್ಲ. ಶಾಂತವಾಗಿಯೇ ಇದ್ದರು.







