ಸ್ಥಾಯಿ ಸಮಿತಿ ಅಧ್ಯಕ್ಷರ ಸಭಾತ್ಯಾಗದ ನಡುವೇ ಮೇಯರ್ ನಿರ್ಣಯ
ಪುರಭವನದ ಬಾಡಿಗೆ ದರ ಶೇ. 50ರಷ್ಟು ಕಡಿತ!

ಕಲಾವಿದರಿಗೆ ಮನ್ನಣೆ ನೀಡಿ ಮಹತ್ವದ ನಿರ್ಧಾರ
ಮಂಗಳೂರು, ಜೂ.29: ನವೀಕೃತ ಪುರಭವನ ಕಲಾವಿದರಿಗೆ ಎಟಕುತ್ತಿಲ್ಲ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪುರಭವನದ ಮುಂಗಡ ಹಾಗೂ ಬಾಡಿಗೆ ದರವನ್ನು ಭಾರೀ ಕಡಿತಗೊಳಿಸುವ ಮೂಲಕ ಮೇಯರ್ ಕವಿತಾ ಸನಿಲ್ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದರು.
ಪುರಭವನದ ಪ್ರಸಕ್ತ ಬಾಡಿಗೆ ದರವನ್ನು ಶೇ. 50ರಷ್ಟು ಕಡಿತ ಮಾಡಲಾಗಿದ್ದು, ಜುಲೈ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಆದರೆ ಮೇಯರ್ ಅವರ ಈ ನಿರ್ಧಾರದಿಂದ ಆಡಳಿತ ಪಕ್ಷದ ಸದಸ್ಯರ ಗದ್ದಲ ಹಾಗೂ ತೆರಿಗೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಸಭಾ ತ್ಯಾಗ ಮಾಡಿದ ಘಟನೆಯೂ ನಡೆಯಿತು.
ನವೀಕೃತ ಪುರಭವನದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ನಿಗದಿಗೊಳಿಸಿರುವ ಬಾಡಿಗೆ ದರ ದುಪ್ಪಟ್ಟಾಗಿರುವ ಕಾರಣ ಅದು ಕಲಾವಿದರಿಗೆ ಸಿಗುತ್ತಿಲ್ಲ ಎಂಬುದಾಗಿ ಇತ್ತೀಚೆಗೆ ಮೇಯರ್ ಕರೆದಿದ್ದ ಸಭೆಯಲ್ಲಿ ಕಲಾವಿದರು ಒಕ್ಕೊರಲಿನಿಂದ ಆಗ್ರಹಿಸಿದ್ದರು. ಇದಕ್ಕೆ ಮನ್ನಣೆ ನೀಡಿ ಮೇಯರ್‌ರವರು ಪುರಭವನದ ಬಾಡಿಗೆ ದರವನ್ನು ಶೇ.50ರಷ್ಟು ಕಡಿಮೆ ಮಾಡಿ ಪೂರ್ವಭಾವಿ ಮಂಜೂರಾತಿ ನೀಡಿದ್ದರು. ‘ಈ ತೀರ್ಮಾನವು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷಳಾದ ನನ್ನ ಗಮನಕ್ಕೆ ಹಾಗೂ ಸ್ಥಾಯಿ ಸಮಿತಿಗೆ ಬಾರದೆ ಮೇಯರ್ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ಆರೋಪಿಸಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಅವರು ಸಭಾತ್ಯಾಗ ಮಾಡುವುದಾಗಿ ಹೇಳಿ ಸಭೆಯಿಂದ ಹೊರನಡೆದರು.
ಈ ಸಂದರ್ಭ ಮೇಯರ್ ನಿರ್ಧಾರವನ್ನು ಬೆಂಬಲಿಸಿ ಬಿಜೆಪಿ ಸದಸ್ಯೆ ಮಾತನಾಡಿ, ಮೇಯರ್ ಕಲಾವಿದರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆದರೆ, ಮೇಯರ್ ನಿರ್ಧಾರ ಏಕಪಕ್ಷೀಯ ಎಂಬ ಆಕ್ಷೇಪ ಆಡಳಿತ ಪಕ್ಷದ ಕೆಲ ಸದಸ್ಯರಿಂದ ವ್ಯಕ್ತವಾಯಿತು.
ಕಾಂಗ್ರೆಸ್‌ನ ಮಹಮ್ಮದ್ ಅವರು ಮಾತನಾಡಿ, ‘ಸದನದ ಅನುಮತಿ ಪಡೆದು ದರ ಕಡಿಮೆ ಮಾಡಬೇಕಿತ್ತು. ಅದಕ್ಕೂ ಮೊದಲೇ ಈ ತೀರ್ಮಾನ ಸರಿಯಲ್ಲ’ ಎಂದರು.
ದೀಪಕ್ ಅವರು ಮಾತನಾಡಿ, ಪುರಭವನದ ಈಗಿನ ಖರ್ಚುವೆಚ್ಚಗಳನ್ನು ಪರಿಗಣಿಸಿ ಎಷ್ಟು ಬರುತ್ತದೆ ಎಂಬುದನ್ನು ಲೆಕ್ಕಹಾಕಿ ದರ ಕಡಿಮೆಯ ಬಗ್ಗೆ ನಿರ್ಧರಿಸಬೇಕಿತ್ತು ಎಂದರು.
ಡಿ.ಕೆ.ಅಶೋಕ್ ಮಾತನಾಡಿ, ಈ ತೀರ್ಮಾನವು ಮತ್ತೆ ತೆರಿಗೆ ಸ್ಥಾಯಿ ಸಮಿತಿಗೆ ಹೋಗಲಿ ಎಂದು ಆಗ್ರಹಿಸಿದರು. ಸಿಪಿಐಎಂನ ದಯಾನಂದ ಶೆಟ್ಟಿ ಕೂಡಾ ವಿರೋಧಿಸಿದರು. ಸದಸ್ಯರ ನಡುವಿನ ಆಕ್ಷೇಪ, ಚರ್ಚೆಯ ವೇಳೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ ಮಾತನಾಡಿ, ‘ಮೇಯರ್ ಅವರ ಏಕಪಕ್ಷೀಯ ತೀರ್ಮಾನ ಸರಿಯಲ್ಲ’ ಎಂದು ಅವರು ಕೂಡಾ ಸಭೆಯಿಂದ ಹೊರನಡೆದರು. .
ಯಾವುದೇ ರಾಜಕೀಯ ಲಾಭಕ್ಕಾಗಿ ಮಾಡಿದ ಕ್ರಮವಲ್ಲ: ಮೇಯರ್
ಈ ವೇಳೆ ಮೇಯರ್ ಕವಿತಾ ಸನಿಲ್ ಮಾತನಾಡಿ, ‘ಪುರಭವನದ ದರವನ್ನು ಕಡಿಮೆ ಮಾಡುವಂತೆ ಜೂನ್ 17ರಂದು ನಡೆದ ಸಭೆಯಲ್ಲಿ ಕಲಾವಿದರು ಒತ್ತಾಯಿಸಿದ್ದರು. ಕಲಾವಿದರಿಗೆ ಪುರಭವನ ಲಭ್ಯವಾಗಬೇಕೆಂಬ ನಿಟ್ಟಿನಲ್ಲಿ ಅವರ ಬೇಡಿಕೆಗೆ ಮನ್ನಣೆ ನೀಡಿ ಈ ನಿರ್ಧಾರ ಕೈಗೊಳ್ಳಲಾಯಿತು. ಜು.1ರಿಂದಲೇ ಪುರಭವನದ ದರ ಕಡಿಮೆಯಾದರೆ ಬಹುತೇಕ ಕಲಾವಿದರಿಗೆ ಅವಕಾಶ ಸಿಗುತ್ತದೆ ಎಂಬ ಕಾರಣದಿಂದ ಪೂರ್ವಭಾವಿ ಮಂಜೂರಾತಿ ನೀಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಲಾಭವೂ ನನಗಿಲ್ಲ. ಸ್ಥಾಯಿ ಸಮಿತಿ ಮೂಲಕ ಈ ಕಡತ ರವಾನೆಯಾದರೆ ಮತ್ತೆ ಸಮಾರು ಐದು ತಿಂಗಳು ಕಲಾವಿದರು ಕಾಯಬೇಕಾಗುತ್ತದೆ ಎಂಬ ಕಾರಣದಿಂದ ಪುರಭವನದ ದರವನ್ನು ಕೈಗೆಟಕುವ ದರಕ್ಕೆ ಸೀಮಿತಗೊಳಿಸಿ ಪೂರ್ವಭಾವಿ ಮಂಜೂರಾತಿ ನೀಡಿದ್ದೇನೆ’ ಎಂದು ಮೇಯರ್ ಕವಿತಾ ಸನಿಲ್ ಸಭೆಯಲ್ಲಿ ತಿಳಿಸಿದರು.







