ಶಿವಮೊಗ್ಗ: ಸರಕಾರಿ ಸಿಟಿ ಬಸ್ ಓಡಿಸಲು - ಪಾಸ್ ಕಲ್ಪಿಸಲು ಸಾರಿಗೆ ಸಚಿವರಿಗೆ ವಿವಿಧ ಸಂಘಟನೆಗಳಿಂದ ಮನವಿ

ಶಿವಮೊಗ್ಗ, ಜೂ. 29: ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ಕಚೇರಿ ಉದ್ಘಾಟನೆಗೆ ಗುರುವಾರ ನಗರಕ್ಕೆ ಆಗಮಿಸಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಎನ್‌ಎಸ್‌ಯುಐ ಹಾಗೂ ಕಾಂಗ್ರೆಸ್ ಐಟಿ ಸೆಲ್ ವಿಭಾಗ ಪ್ರತ್ಯೇಕವಾಗಿ ಮನವಿ ಪತ್ರ ಅರ್ಪಿಸಿ, ಶಿವಮೊಗ್ಗ ನಗರದಲ್ಲಿ ಜೆನ್‌ನರ್ಮ್ ಯೋಜನೆಯ ಸರ್ಕಾರಿ ಸಿಟಿ ಬಸ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಓಡಿಸಬೇಕು. ಪಾಸ್ ವ್ಯವಸ್ಥೆ ಆರಂಭಿಸಬೇಕು ಎಂದು ಆಗ್ರಹಿಸಿವೆ.
ಎನ್‌ಎಸ್‌ಯುಐ: ಸಂಘಟನೆಯ ಕಾರ್ಯಕರ್ತರು ಮನವಿ ಪತ್ರ ಅರ್ಪಿಸಿ, ಜೆನ್ ನರ್ಮ್ ಯೋಜನೆಯಡಿ ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳಲ್ಲಿ ಸರ್ಕಾರಿ ಸಿಟಿ ಬಸ್ ಸಂಚಾರ ಆರಂಭಿಸಿರುವ ರಾಜ್ಯ ಸರ್ಕಾರದ ಕ್ರಮ ಅಭಿನಂದನೀಯವಾಗಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಆದರೆ ಶಿವಮೊಗ್ಗ ನಗರಕ್ಕೆ 65 ಸಿಟಿ ಬಸ್ ಮಂಜೂರಾಗಿದ್ದು, ಇದರಲ್ಲಿ ಕೆಲವೇ ಬಸ್‌ಗಳು ಮಾತ್ರ ಓಡಾಡುತ್ತಿವೆ. ಇಂದಿಗೂ ನಗರದ ಹಲವು ಬಡಾವಣೆಗಳು ನಗರ ಸಾರಿಗೆ ಬಸ್‌ಗಳ ಸಂಪರ್ಕದಿಂದ ವಂಚಿತವಾಗಿವೆ. ಇಂತಹ ಬಡಾವಣೆಗಳಿಗೆ ಸರ್ಕಾರಿ ಸಿಟಿ ಬಸ್ ಓಡಿಸಬೇಕು. ಹಾಗೆಯೇ ಮಂಜೂರಾಗಿರುವ 65 ಬಸ್‌ಗಳ ಪೂರ್ಣ ಪ್ರಮಾಣದ ಬಸ್ ಓಡಾಟಕ್ಕೆ ಕ್ರಮಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಬೆಂಗಳೂರಿನ ಬಿಎಂಟಿಸಿ ಮಾದರಿಯಲ್ಲಿ ಶಿವಮೊಗ್ಗ ಹಾಗೂ ಭದ್ರಾವತಿಗಳಲ್ಲಿ ಸಂಚರಿಸುತ್ತಿರುವ ಸರ್ಕಾರಿ ಸಿಟಿ ಬಸ್‌ಗಳಲ್ಲಿಯೂ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ವರ್ಗದ ನಾಗರೀಕರಿಗೆ ರಿಯಾಯ್ತಿ ಪಾಸ್ ವ್ಯವಸ್ಥೆ ಕಾರ್ಯಗತಗೊಳಿಸಬೇಕು. ರೈಲ್ವೆ ವೇಳಾಪಟ್ಟಿಗೆ ಅನುಗುಣವಾಗಿ ಮುಖ್ಯ ರೈಲ್ವೆ ನಿಲ್ದಾಣದಿಂದ ವಿವಿಧ ಬಡಾವಣೆಗಳಿಗೆ ಬಸ್ ಓಡಿಸಬೇಕು ಎಂದು ಸಂಘಟನೆ ಮನವಿಯಲ್ಲಿ ತಿಳಿಸಿದೆ.
ಮನವಿ ಅರ್ಪಿಸುವ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ಬಾಲಾಜಿ ಮೊದಲಾದವರಿದ್ದರು.
ಕಾಂಗ್ರೆಸ್ ಐಟಿ ಸೆಲ್: ಶಿವಮೊಗ್ಗ ನಗರದಲ್ಲಿ ಪ್ರಸ್ತುತ 30 ಸರ್ಕಾರಿ ಸಿಟಿ ಬಸ್ ಮಾತ್ರ ಸಂಚರಿಸುತ್ತಿದ್ದು, ಜೆನ್ ನರ್ಮ್ ಯೋಜನೆಯಡಿ ಮಂಜೂರಾಗಿರುವ ಎಲ್ಲ 65 ಸಿಟಿ ಬಸ್‌ಗಳ ಸಂಚಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಐಟಿ ಸೆಲ್ ಘಟಕವು ಸಾರಿಗೆ ಸಚಿವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಆಗ್ರಹಿಸಿದೆ.
ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ. ಮುಖ್ಯ ಬಸ್ ನಿಲ್ದಾಣ ಹಾಗೂ ಸರ್ಕಾರಿ ನಗರ ಸಾರಿಗೆ ಬಸ್‌ಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಕಲ್ಪಿಸಬೇಕು. ಬಸ್ ನಿಲ್ದಾಣಗಳ ಆವರಣಗಳಲ್ಲಿ ಎಲ್‌ಇಡಿ ವ್ಯವಸ್ಥೆ ಅಳವಡಿಸಿ, ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಬಿತ್ತರಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಮನವಿ ಅರ್ಪಿಸುವ ಸಂದರ್ಭದಲ್ಲಿ ಸಂಘಟನೆಯ ಮುಖ್ಯಸ್ಥ ಮೋಹನ್, ಪೂರ್ಣೇಶ್ ಮೊದಲಾದವರಿದ್ದರು. ರಾತ್ರಿ 10.30 ರವರೆಗೆ ಸಿಟಿ ಬಸ್ ಓಡಿಸಲು ಆಗ್ರಹ
ಪ್ರಸ್ತುತ ಶಿವಮೊಗ್ಗ ನಗರದಲ್ಲಿ ಸಂಚಾರಿಸುತ್ತಿರುವ ಸರ್ಕಾರಿ ಸಿಟಿ ಬಸ್‌ಗಳು ಸಂಜೆ 7.30 ರವರೆಗೆ ಮಾತ್ರ ಸಂಚರಿಸುತ್ತಿವೆ. ಇದರಿಂದ ನಾಗರೀಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಪರ ಊರುಗಳಿಂದ ಆಗಮಿಸುವ ನಾಗರೀಕರು ತಮ್ಮ ಮನೆಗಳಿಗೆ ತೆರಳಲು ಪರದಾಡುವಂತಾಗಿದೆ. ದುಬಾರಿ ಬಾಡಿಗೆ ಪ್ರಯಾಣ ತೆರುವಂತಾಗಿದೆ. ಈ ಹಿನ್ನೆಲೆಯಲ್ಲಿ ರಾತ್ರಿ 10.30 ರವರೆಗೆ ಸರ್ಕಾರಿ ಸಿಟಿ ಬಸ್‌ಗಳನ್ನು ನಗರದಲ್ಲಿ ಓಡಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಎನ್‌ಎಸ್‌ಯುಐ ಸಂಘಟನೆಯು ಸಾರಿಗೆ ಸಚಿವರಿಗೆ ಆಗ್ರಹಿಸಿದೆ.







