ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗೀಯ ಕಚೇರಿಗೆ ಸಾರಿಗೆ ಸಚಿವರಿಂದ ಚಾಲನೆ

ಶಿವಮೊಗ್ಗ, ಜೂ. 29: ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಜೆಟ್‌ನಲ್ಲಿ ಘೋಷಿಸಿದ್ದ ಕೆ.ಎಸ್.ಆರ್.ಟಿ.ಸಿ. ಶಿವಮೊಗ್ಗ ವಿಭಾಗೀಯ ಕಚೇರಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದು, ಗುರುವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ನಗರದ ವಿನೋಬ ನಗರದ ಸೂಡಾ ವಾಣಿಜ್ಯ ಸಂಕೀರ್ಣದಲ್ಲಿ ತೆರೆಯಲಾಗಿರುವ ವಿಭಾಗೀಯ ಕಚೇರಿಯನ್ನು ಉದ್ಘಾಟಿಸಿದರು.
ನಂತರ ಮುಖ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಆವರಣದಲ್ಲಿ ಏರ್ಪಡಿಸಲಾಗಿದ್ದ ವೇದಿಕೆ ಸಮಾರಂಭದಲ್ಲಿ ಸಚಿವರು ಮಾತನಾಡಿ, ’ವಿಭಾಗೀಯ ಕಚೇರಿಗೆ ಜಿಲ್ಲಾಡಳಿತ ಸೂಕ್ತ ಸ್ಥಳ ನೀಡಿದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಶೀಘ್ರ ಹಣಕಾಸು ನೆರವು ನೀಡಲಿದೆ ಎಂದು ಹೇಳಿದ ಅವರು, ’ಕಾಲಮಿತಿಯಲ್ಲಿ ಶಿವಮೊಗ್ಗ ವಿಭಾಗಕ್ಕೆ ಹೆಚ್ಚುವರಿ ಬಸ್, ಅದಕ್ಕೆ ತಕ್ಕಂತೆ ಸಿಬ್ಬಂದಿಗಳನ್ನು ಒದಗಿಸಲಾಗುವುದು. ಜೊತೆಗೆ ಹೊಸ ಬಸ್ ಮಾರ್ಗಗಳನ್ನು ಆರಂಭಿಸಲಾಗುವುದು’ ಎಂದರು.
ಜೆನರ್ಮ್ ಯೋಜನೆಯಡಿ ಶಿವಮೊಗ್ಗ ನಗರಕ್ಕೆ 65 ಸಿಟಿ ಬಸ್‌ಗಳು ಮಂಜೂರಾಗಿದ್ದು, ಆ ಪೈಕಿ 36 ಬಸ್‌ಗಳನ್ನು ನೀಡಲಾಗಿದೆ. ಉಳಿದ ಬಸ್‌ಗಳನ್ನು ಕೆಲವೇ ತಿಂಗಳುಗಳಲ್ಲಿ ಒದಗಿಸಲಾಗುವುದು. ಗ್ರಾಮಾಂತರ ಪ್ರದೇಶಗಳಿಗೆ ಮತ್ತು ನಗರದ ಹೊರವಲಯದಲ್ಲಿರುವ ಬಡಾವಣೆಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಕೆಎಸ್‌ಆರ್‌ಟಿಸಿ ಅಧ್ಯಕ್ಷ ಗೋಪಾಲ್ ಪೂಜಾರಿ ಮಾತನಾಡಿ, ಹೊಸಮಾರ್ಗಗಳಲ್ಲಿ ಬಸ್ ಓಡಿಸಲು ಜಿಲ್ಲಾಧಿಕಾರಿಯಿಂದ ಸಾಮಾನ್ಯ ಪರವಾನಿಗೆ ದೊರೆತ ನಂತರ ಆರಂಭಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವೈಫೈಗಳನ್ನು ಒದಗಿಸಲಾಗುತ್ತಿದೆ. ಪ್ರತಿ ಬಸ್ ನಿಲ್ದಾಣದಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. ಸುಮಾರು 1500 ಹೊಸ ಬಸ್‌ಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ. ಇವುಗಳಲ್ಲಿ 125 ವೋಲ್ವೋ ಬಸ್‌ಗಳು ಸೇರಿವೆ. ಶಿವಮೊಗ್ಗದಿಂದ ಅಂತರ್ರಾಜ್ಯ ಸೇವೆಗೆ ಒತ್ತು ನೀಡಲಾಗುವುದು ಎಂದರು.
ಸಮಾರಂಭದಲ್ಲಿ ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ವಿಧಾನಪರಿಷತ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಎಂಎಲ್‌ಸಿ ಆರ್. ಪ್ರಸನ್ನಕುಮಾರ್, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಮೇಯರ್ ಏಳುಮಲೈ, ಕಾಡಾ ಅಧ್ಯಕ್ಷ ಸುಂದರೇಶ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್ ಉಪಸ್ಥಿತರಿದ್ದರು.







