ದಾವಣಗೆರೆಯಲ್ಲಿ ಜೆಡಿಎಸ್ ಸಮಾವೇಶ
.jpg)
ಶಿವಮೊಗ್ಗ, ಜೂ. 29: ರಾಜ್ಯ ಜೆಡಿಎಸ್ ಪರಿಶಿಷ್ಟ ಪಂಗಡ ವಿಭಾಗದಿಂದ ಜುಲೈ 1ರಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಹಾಗೂ ರಾಜ್ಯಮಟ್ಟದ ಜೆಡಿಎಸ್ ಸಮಾವೇಶ ಆಯೋಜಿಸಲಾಗಿದೆ ಎಂದು ಶಾಸಕಿ ಶಾರದಾ ಪೂರ್ಯನಾಯ್ಕ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಸಮಾವೇಶಕ್ಕೆ ಜಿಲ್ಲೆಯಿಂದ ಸುಮಾರು 5 ಸಾವಿರ ಹಾಗೂ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸಮಾವೇಶ ಉದ್ಘಾಟಿಸಲಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ವಾಲ್ಮೀಕಿ ಸಮುದಾಯಕ್ಕೆ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಎಚ್.ಡಿ. ದೇವೇಗೌಡ ವಾಲ್ಮೀಕಿ ಗುರುಪೀಠಕ್ಕೆ ಜಮೀನು ಖರೀದಿಸಲು ದೇಣಿಗೆ ನೀಡಿದ್ದೂ ಅಲ್ಲದೆ, ವಾಲ್ಮೀಕಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಲು ಶ್ರಮ ವಹಿಸಿದ್ದಾರೆ. ಇದರಿಂದ ವಿಧಾನಸಭೆಗೆ 15 ಕ್ಕೂ ಹೆಚ್ಚು ಶಾಸಕರು ಆಯ್ಕೆಯಾಗಲು ಅನುಕೂಲವಾಗಿದೆ. ಇದನ್ನು ಮನಗಂಡು ಅಂದು ವಾಲ್ಮೀಕಿ ಜನತೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ಪಕ್ಷದ ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಎಚ್.ಆರ್. ಹನುಮಂತಪ್ಪ, ಹೊಳೆಹಟ್ಟಿ ರವಿಕುಮಾರ್, ಪಾಲಾಕ್ಷಪ್ಪ, ದಾದಾಪೀರ್, ಕೃಷ್ಣಪ್ಪ, ಸತೀಶ್, ನಾಗರಾಜ್ ಇನ್ನಿತರರು ಉಪಸ್ಥಿತರಿದ್ದರು.







