ಮಾಜಿ ಯುವರಾಜನನ್ನು ಅರಮನೆಯೊಳಗೆ ನಿರ್ಬಂಧಿಸಿಲ್ಲ
‘ನ್ಯೂಯಾರ್ಕ್ ಟೈಮ್ಸ್’ ವರದಿಗೆ ಸೌದಿ ಅಧಿಕಾರಿ ಸ್ಪಷ್ಟನೆ

ದುಬೈ, ಜೂ. 29: ಸೌದಿ ಅರೇಬಿಯದ ಪಟ್ಟದ ಯುವರಾಜ ಸ್ಥಾನವನ್ನು ಕಳೆದುಕೊಂಡ ಬಳಿಕ ರಾಜಕುಮಾರ ಮುಹಮ್ಮದ್ ಬಿನ್ ನಯೀಫ್‌ರನ್ನು ಅರಮನೆಯೊಳಗೆ ನಿರ್ಬಂಧಿಸಲಾಗಿದೆ ಹಾಗೂ ಅವರು ವಿದೇಶ ಪ್ರಯಾಣ ಕೈಗೊಳ್ಳುವುದನ್ನು ನಿಷೇಧಿಸಲಾಗಿದೆ ಎಂಬುದಾಗಿ ‘ನ್ಯೂಯಾರ್ಕ್ ಟೈಮ್ಸ್’ ಮಾಡಿರುವ ವರದಿಯನ್ನು ಆ ದೇಶದ ಅಧಿಕಾರಿಯೊಬ್ಬರು ಗುರುವಾರ ನಿರಾಕರಿಸಿದ್ದಾರೆ.
ಆಂತರಿಕ ಸಚಿವ ಹಾಗೂ ಪಟ್ಟದ ಯುವರಾಜರಾಗಿದ್ದ ನಯೀಫ್‌ರನ್ನು ಸೌದಿ ದೊರೆ ಸಲ್ಮಾನ್ ವಾರದ ಹಿಂದೆ ಅವರ ಎಲ್ಲ ಹುದ್ದೆಗಳಿಂದ ವಜಾಗೊಳಿಸಿ ತನ್ನ ಪುತ್ರ ಮುಹಮ್ಮದ್ ಬಿನ್ ಸಲ್ಮಾನ್‌ರನ್ನು ಪಟ್ಟದ ಯುವರಾಜನಾಗಿ ನೇಮಿಸಿರುವುದನ್ನು ಸ್ಮರಿಸಬಹುದಾಗಿದೆ.
2003 ಮತ್ತು 2006ರ ನಡುವೆ ಮುಹಮ್ಮದ್ ಬಿನ್ ನಯೀಫ್ ಆಂತರಿಕ ಸಚಿವರಾಗಿ ಸೌದಿ ಅರೇಬಿಯದಲ್ಲಿ ಅಲ್-ಖಾಯಿದ ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸಿದ್ದರು ಹಾಗೂ ಈ ಕಾರಣಕ್ಕಾಗಿ ಅಮೆರಿಕದ ವಿಶೇಷ ಪ್ರಶಂಸೆಗೆ ಪಾತ್ರರಾಗಿದ್ದರು.
ನೂತನ ಪಟ್ಟದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಸೌದಿ ಅರೇಬಿಯದ ಆರ್ಥಿಕತೆಯನ್ನು ತೈಲದ ಮೇಲಿನ ಅತಿ ಅವಲಂಬನೆಯಿಂದ ಹೊರತರುವ ಮಹತ್ವಾಕಾಂಕ್ಷೆಯ ಸುಧಾರಣಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ.
ಮುಹಮ್ಮದ್ ಬಿನ್ ನಯೀಫ್ ಸೌದಿ ಅರೇಬಿಯದಿಂದ ಹೊರಹೋಗುವುದನ್ನು ನಿಷೇಧಿಸಲಾಗಿದೆ ಹಾಗೂ ಜಿದ್ದಾದಲ್ಲಿರುವ ಅವರ ಅರಮನೆಯೊಳಗೆ ನಿರ್ಬಂಧಿಸಲಾಗಿದೆ ಎಂಬುದಾಗಿ ಅಮೆರಿಕದ ಹಲವು ಅಧಿಕಾರಿಗಳು ಮತ್ತು ರಾಜ ಕುಟುಂಬಕ್ಕೆ ನಿಕಟವಾಗಿರು ಸೌದಿ ಪ್ರಜೆಗಳನ್ನು ಉಲ್ಲೇಖಿಸಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿರುವುದನ್ನು ಸ್ಮರಿಸಬಹುದಾಗಿದೆ.
‘‘ಇದು ಸತ್ಯವಲ್ಲ. 100 ಶೇಕಡ ಸುಳ್ಳು’’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ಹೇಳಿದರು.
ಆದರೆ, ಹೆಚ್ಚಿನ ಮಾಹಿತಿಯನ್ನು ಅವರು ನೀಡಲಿಲ್ಲ.







