ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ
ಬೆಂಗಳೂರು, ಜೂ.29: ಮಹಿಳೆಯರಿಗೆ ಸಾಮಾಜಿಕ ಸಮಾನತೆಗಾಗಿ ಮತ್ತು ಸಂವಿಧಾನ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ರಾಜ್ಯ ದಲಿತ ಮಹಿಳಾ ಒಕ್ಕೂಟದ ವತಿಯಿಂದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರ ನಿವಾಸದೆದರು ಧರಣಿ ನಡೆಸಿದರು.
ಧರಣಿಗೂ ಮುನ್ನಾ ನಗರದ ವಿಲುಯಮ್ಸ್ ಟೌನ್‌ನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಸಚಿವರ ನಿವಾಸದವರೆಗೂ ರ್ಯಾಲಿ ನಡೆಸಿದರು. ಧರಣಿಯ ನೇತೃತ್ವ ವಹಿಸಿದ್ದ ಸಂಘಟನೆಯ ಅಧ್ಯಕ್ಷೆ ಅನುಸೂಯ ಗಿರಿಧರ್ ಮಾತನಾಡಿ, ರಾಜ್ಯದಲ್ಲಿ ಇನ್ನೂ ಜೀವಂತವಾಗಿರುವ ದೇವದಾಸಿ ಹಾಗೂ ಜೀತ ಪದ್ಧತಿಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಇಂತಹ ಅನಿಷ್ಟ ಪದ್ಧತಿಗಳನ್ನು ಪ್ರೋತ್ಸಾಹಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಬಡ ಮಹಿಳೆಯರಿಗೆ ನೀಡುತ್ತಿರುವ ಸಾಲ ಸೌಲಭ್ಯಗಳನ್ನು ಮಧ್ಯವರ್ತಿಗಳು ಅಧಿಕಾರಿಗಳ ಜತೆ ಕೈ ಜೋಡಿಸಿ ವಂಚಿಸಲಾಗುತ್ತಿದೆ. ಇದರಿಂದ ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೆಚ್ಚು ದಲಿತ ಮಹಿಳೆಯರನ್ನು ನೇಮಕ ಮಾಡಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬೇಕು ಎಂಬ ಆಗ್ರಹವೂ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.







