ಮಾಡೂರಿನಲ್ಲಿ ಕುಸಿತಗೊಂಡ ಸರಕಾರಿ ಬಾವಿ

ಉಳ್ಳಾಲ, ಜೂ.29: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಡೂರು ಕೊರಗಜ್ಜ ಕಟ್ಟೆ ಸಮೀಪ ಇರುವ ಸರಕಾರಿ ಬಾವಿಯೊಂದು ಮಳೆಯಿಂದಾಗಿ ಕುಸಿತಗೊಂಡಿರುವ ಘಟನೆ ಗುರುವಾರ ಸಂಭವಿಸಿದೆ.
ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಈ ಬಾವಿಯಿಂದ ಹಲವು ಮನೆಗಳಿಗೆ ನೀರು ಪೂರೈಕೆಯಾಗುತ್ತಿತ್ತು. ಬಾವಿಯೊಳಗಡೆ ರಿಂಗ್‌ನ ಮೇಲೆ ಹಾಕಲಾಗಿದ್ದ ಕೆಂಪು ಕಲ್ಲು ಬಿರುಕುಬಿಟ್ಟಿದ್ದು, ಮಳೆಗೆ ಅದು ಇನ್ನಷ್ಟು ಬಿರುಕು ಬಿಟ್ಟು ಇಡೀ ಬಾವಿಯ ದಂಡೆಯೇ ಕುಸಿದಿದೆ.
ಹಿಂದೆ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ನಿರ್ಮಿಸಲಾಗಿದ್ದ ಬಾವಿ ಇದಾಗಿದ್ದು, ಶಿಥಿಲಾವಸ್ಥೆಯಲ್ಲಿ ಇರುವ ಕುರಿತು ಸ್ಥಳೀಯ ಸದಸ್ಯರಿಗೆ ಸಾರ್ವಜನಿಕರು ಮೌಖಿಕವಾಗಿ ದೂರು ನೀಡಿದ್ದರು. ಬಾವಿ ಕುಸಿತದಿಂದ ಸುಮಾರು 2 ಲಕ್ಷದ ವರೆಗೆ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಹಿಂದೆ ಸ್ಥಳೀಯರು ನೀಡಿದ ದೂರಿನಂತೆ ಬೇಸಿಗೆ ಕಾಲದಲ್ಲಿ ಬಾವಿ ದಂಡೆಯನ್ನು ದುರಸ್ತಿಗೊಳಿಸಲಾಗಿತ್ತು. ಕುಡಿಯುವ ನೀರಿಗಾಗಿ ಬರುವ ಅನುದಾನದ ಮೂಲಕ ಅದನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗುತ್ತೇವೆ. ಸದ್ಯ ಬಾವಿಯೊಳಕ್ಕೆ ನೀರು ನುಗ್ಗದಂತೆ, ಹಾಗೂ ಮುಂಜಾಗ್ರತಾ ಕ್ರಮವಾಗಿ ತಡೆ ಬೇಲಿ ನಿರ್ಮಿಸಲಾಗುವುದು.