'ಆಸ್ಕರ್ ಗೌರವ' ಪಟ್ಟಿಯಲ್ಲಿ ಒಬ್ಬ ಖಾನ್ ಮಾತ್ರ ಮಿಸ್ !
ಬಾಲಿವುಡ್ ಸೂಪರ್ ಸ್ಟಾರ್ ಗಳಿಗೆ ಮತ ಚಲಾಯಿಸಲು ಅಹ್ವಾನ

ಮುಂಬೈ , ಜೂ. 29 : ಪ್ರತಿಷ್ಠಿತ ಆಸ್ಕರ್ಸ್ ಪ್ರಶಸ್ತಿ ಕೊಡುವ ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಎಂಡ್ ಸಯನ್ಸ್ ಈ ಬಾರಿ ಚಿತ್ರ ಗಳನ್ನು ವೀಕ್ಷಿಸಿ ಮತ ಚಲಾಯಿಸಲು ನೂತನ 774 ಸದಸ್ಯರಿಗೆ ಅಹ್ವಾನ ನೀಡಿದೆ .
ಕಳೆದೆರಡು ವರ್ಷಗಳಿಂದ ಬಿಳಿಯರು ಹಾಗು ಪುರುಷರೇ ಹೆಚ್ಚಿರುವ ಆಯ್ಕೆ ಸಮಿತಿ ಇತ್ತು ಎಂದು ಆಸ್ಕರ್ ಪ್ರಶಸ್ತಿ ವಿರುದ್ಧ ಅಭಿಯಾನ ನಡೆದಿತ್ತು. ಇದೀಗ ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಅಕಾಡೆಮಿ ಕಳೆದ ಬಾರಿಗಿಂತ (683) ಹೆಚ್ಚು ಸಾಧಕರಿಗೆ ಅದರಲ್ಲೂ ಮಹಿಳೆಯರಿಗೆ ಆಹ್ವಾನ ನೀಡಿದೆ.
ಈ ಬಾರಿಯ ಆಸ್ಕರ್ ಭಾರತದ ಅದರಲ್ಲೂ ಬಾಲಿವುಡ್ ಪಾಲಿಗೆ ಬಂಪರ್ ಆಹ್ವಾನವನ್ನೇ ನೀಡಿದೆ. ಬಾಲಿವುಡ್ ನ ಸೂಪರ್ ಸ್ಟಾರ್ ಗಳಾದ ಅಮಿತಾಭ್ ಬಚ್ಚನ್ , ಆಮಿರ್ ಖಾನ್ , ಸಲ್ಮಾನ್ ಖಾನ್ , ಐಶ್ವರ್ಯ ರೈ, ಇರ್ಫಾನ್ ಖಾನ್ , ಪ್ರಿಯಾಂಕಾ ಚೋಪ್ರಾ , ದೀಪಿಕಾ ಪಡುಕೋಣೆ ರನ್ನು ಆಸ್ಕರ್ ಈ ಬಾರಿ ಮತ ಚಲಾಯಿಸಲು ಆಹ್ವಾನಿಸಿ ಗೌರವಿಸಿದೆ.
ಜೊತೆಗೆ ಭಾರತೀಯ ನಿರ್ದೇಶಕರಾದ ಮೃಣಾಲ್ ಸೇನ್ , ಬುದ್ಧದೇಬ್ ದಾಸಗುಪ್ತ, ಗೌತಮ್ ಘೋಷ್ , ಲೇಖಕಿ ಸೂನಿ ತಾರಾಪೊರ್ ವಾಲಾ , ವಸ್ತ್ರ ವಿನ್ಯಾಸಕ ಅರ್ಜುನ್ ಭಾಸಿನ್ , ಸಾಕ್ಷ್ಯ ಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್ , ಶಬ್ದ ವಿನ್ಯಾಸಕಾರ ಅಮ್ರಿತ್ ಪ್ರೀತಮ್ ದತ್ತಾ ಅವರನ್ನೂ ಅಕಾಡೆಮಿ ಆಹ್ವಾನಿಸಿದೆ.
ಆದರೆ , ಬಾಲಿವುಡ್ ನ ಬಾದಷಾ , ಸೂಪರ್ ಸ್ಟಾರ್ ಶಾರುಖ್ ಖಾನ್ ರನ್ನು ಅಕಾಡೆಮಿ ಆಹ್ವಾನಿಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.







