ಸಂಪತ್ತು-ಅಧಿಕಾರಕ್ಕಾಗಿ ದೇವರನ್ನು ಸೃಷ್ಟಿಸಿದ ಬ್ರಾಹ್ಮಣರು: ಅನಸೂಯ ಕಾಂಬ್ಳೆ
‘ರಾಷ್ಟ್ರೀಯತೆ-ಭಾರತವೆಂಬ ಪರಿಕಲ್ಪನೆ’ ವಿಚಾರ ಸಂಕಿರಣ
ಬೆಂಗಳೂರು, ಜೂ.29: ಭಾರತದ ಮೂಲನಿವಾಸಿಗಳಾದ ನಾಗಾ ಜನಾಂಗದಲ್ಲಿದ್ದ ಭೂ ಸಂಪತ್ತು ಹಾಗೂ ರಾಜಕೀಯ ಅಧಿಕಾರವನ್ನು ಪಡೆಯುವ ಸಲುವಾಗಿ ಬ್ರಾಹ್ಮಣರು ಪುರಾಣ ಹಾಗೂ ಕೃತಕ ದೇವರುಗಳನ್ನು ಸೃಷ್ಟಿಸಿದರು ಎಂದು ಬರಹಗಾರ್ತಿ ಅನಸೂಯ ಕಾಂಬ್ಳೆ ತಿಳಿಸಿದ್ದಾರೆ.
ಗುರುವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯತೆ-ಭಾರತವೆಂಬ ಪರಿಕಲ್ಪನೆ’ ವಿಚಾರ ಸಂಕಿರಣದಲ್ಲಿ ‘ಸಾಂಸ್ಕೃತಿಕ ರಾಷ್ಟ್ರೀಯತೆ’ ಕುರಿತು ಮಾತನಾಡಿದ ಅವರು, ಬ್ರಾಹ್ಮಣರ ಕುತಂತ್ರ ಯೋಚನೆಯನ್ನು ಅರಿಯದ ನಾಗಾ ಜನಾಂಗ ಅವರನ್ನು ನಂಬುವ ಮೂಲಕ ನಿಗರ್ತಿಕರಾದರು ಎಂದು ತಿಳಿಸಿದರು.
ನಾಗಾ ವಂಶದ ಪ್ರಮುಖ ದೊರೆ ಬಲಿಚಕ್ರವರ್ತಿಯ ಮೇಲೆ ದಾನ ಎಂಬ ವೌಲ್ಯವನ್ನು ಹೇರುವ ಮೂಲಕ ಸಂಪೂರ್ಣ ಆಸ್ತಿಯನ್ನು ಬ್ರಾಹ್ಮಣರು ವಶಪಡಿಸಿಕೊಂಡರು. ಇವರ ಕುತಂತ್ರಕ್ಕೆ ಒಪ್ಪದ ಹಿರಣ್ಯ ಕಶಪುವಿನ ಮೇಲೆ ತಮ್ಮ ಮಗನನ್ನೇ ಎತ್ತಿಕಟ್ಟಿ ಸೋಲಿಸಲಾಯಿತು. ಹೀಗಾಗಿ ನಾನಾ ಕುತಂತ್ರಗಳನ್ನು ಬಳಸಿ ನಾಗಾ ಜನಾಂಗವನ್ನು ಸಂಪೂರ್ಣವಾಗಿ ಅಧಿಕಾರ ಹೀನರನ್ನಾಗಿ ಮಾಡಿದರು ಎಂದು ಅವರು ತಿಳಿಸಿದರು.
ಬ್ರಾಹ್ಮಣರು ಪ್ರತಿಪಾದಿಸುವ ದೇವರು, ಪುರಾಣಗಳಲ್ಲಿ ವ್ಯಕ್ತವಾಗುವ ವಿಷಯಗಳನ್ನು ವಿಶ್ಲೇಷಣಾತ್ಮಕವಾಗಿ ಚಿಂತಿಸುವ ಮೂಲಕ ಅವರ ಜನವಿರೋಧಿ ನೀತಿಯನ್ನು ಸರಿಯಾಗಿ ಅರಿಯಬೇಕಾಗಿದೆ. ಇದಕ್ಕೆ 12ನೆ ಶತಮಾನದ ಶರಣರು ನಮಗೆ ಮಾದರಿಯಾಗಿದ್ದಾರೆ. ಅವರ ಹಾದಿಯಲ್ಲಿ ಸಾಗುವ ಮೂಲಕ ವೈಚಾರಿಕ ಪ್ರಜ್ಞೆಯನ್ನು ಗಳಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಪ್ರಾಧ್ಯಾಪಕ ಎ.ನಾರಾಯಣ ಗಟ್ಟಿ ಮಾತನಾಡಿ, ದೇಶದಲ್ಲಿ ಅಂಬೇಡ್ಕರ್ ಕಲ್ಪನೆಯ ರಾಷ್ಟ್ರೀಯತೆಯ ಕುರಿತು ಸಾಕಷ್ಟು ಚರ್ಚೆಯಾಗಿಲ್ಲ. ಹೀಗಾಗಿ ಸಂಘಪರಿವಾರದ ರಾಷ್ಟ್ರೀಯತೆಗೆ ಪರ್ಯಾಯವಾಗಿ ಬಹುಸಂಸ್ಕೃತಿಯನ್ನೊಳಗೊಂಡ ರಾಷ್ಟ್ರೀಯತೆ ಮುನ್ನೆಲೆಗೆ ಬಂದಿಲ್ಲ ಎಂದು ವಿಷಾದಿಸಿದರು.
ಸಾವಿರಾರು ವರ್ಷಗಳಿಂದ ಜಾತಿ ಶೋಷಣೆ ಹಾಗೂ ಎಲ್ಲ ತರಹದ ಅಸಮಾನತೆಯಿಂದ ನರಳುತ್ತಿರುವ ಭಾರತದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಬರುವವರೆಗೆ ರಾಷ್ಟ್ರೀಯತೆಗೆ ಯಾವುದೇ ಅರ್ಥ ಬರುವುದಿಲ್ಲವೆಂದು ಬಲವಾಗಿ ನಂಬಿದ್ದರು. ಹೀಗಾಗಿಯೇ ಅವರು ಸ್ವಾತಂತ್ರ ಹೋರಾಟಕ್ಕಿಂತ ಮುಖ್ಯವಾಗಿ ಸಾಮಾಜಿಕ ಬದಲಾವಣೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು ಎಂದು ಅವರು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಪ್ರಕಾರ ರಾಷ್ಟ್ರೀಯತೆ ಎಂದರೆ ಒಂದು ದೇಶದಲ್ಲಿ ವಾಸಿಸುವ ಜನತೆ ಸಾಮಾಜಿಕ, ರಾಜಕೀಯ, ಆರ್ಥಿಕತೆ ಸೇರಿದಂತೆ ಎಲ್ಲ ರೀತಿಯಲ್ಲೂ ಸಮಾನರಾಗಿರಬೇಕು. ಆಗ ಮಾತ್ರ ರಾಷ್ಟ್ರೀಯತೆಗೆ ಒಂದು ಅರ್ಥ ಬರುತ್ತದೆ. ಆದರೆ, ಭಾರತದಲ್ಲಿ ಇಂದಿಗೂ ರಾಷ್ಟ್ರೀಯತೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಿಲ್ಲ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಪಾತ್ರ ಅತಿ ಮುಖ್ಯವಾಗುತ್ತದೆ ಎಂದು ಅವರು ನಂಬಿದ್ದರು ಎಂದು ಅವರು ಸ್ಮರಿಸಿದರು.
ವಿಚಾರಗೋಷ್ಟಿಯಲ್ಲಿ ಎಐಡಿಡ್ಲುಎನ ಪ್ರಧಾನ ಕಾರ್ಯದರ್ಶಿ ಮರಿಯಂ ಧವಳೆ, ವಾರ್ತಾಭಾರತಿ ಪತ್ರಿಕೆಯ ಸಂಪಾದಕ ಅಬ್ದುಲ್ ಸಲಾಂ ಪುತ್ತಿಗೆ ಮತ್ತಿತರರಿದ್ದರು.







