ಅನ್ನ ಭಾಗ್ಯ ಯೋಜನೆ ಕೇಂದ್ರ ಸರಕಾರದ್ದು: ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ

ಹನೂರು, ಜೂ. 29: ಅನ್ನ ಭಾಗ್ಯ ಯೋಜನೆ ಕೇಂದ್ರ ಸರ್ಕಾರದ್ದು ಆದರೆ ಸಿದ್ದರಾಮಯ್ಯ ನಮ್ಮ ಯೋಜನೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಹೇಳಿದರು.
ಅವರು ಕೊಳ್ಳೇಗಾಲ ತಾಲೂಕಿನ ಮಣಗಳ್ಳಿ ತಾ. ಪಂ. ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಲು ಬಂದಿದ್ದ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದ ಸಂದರ್ಭ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಭಾಗ್ಯಲಕ್ಷ್ಮಿ ಬಾಂಡ್ ಉಚಿತ ಸೈಕಲ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತರ ಮಹಿಳೆಯರು ಮಕ್ಕಳು ರೈತರಿಗೆ ಹಿತ ಕಾಪಾಡುವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಉಜ್ವಲ ಯೋಜನೆ, ಅನಿಲಭಾಗ್ಯ ಯೋಜನೆ, ಫಸಲ್ ಭೀಮ್ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದ ಅವರು ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪನವರೇ ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದರು.
ಪರಿಮಳ ನಾಗಪ್ಪ ಮಾತನಾಡಿ, ಕಾರ್ಯಕರ್ತರು ಬಿಜೆಪಿ ಲೋಕೇಶ್‌ರವರ ಗೆಲುವಿಗೆ ಶ್ರಮಿಸಬೇಕು. ಈ ಚುನಾವಣೆಯು ಮುಂದಿನ ವಿಧಾನ ಸಭಾ ಚುನಾವಣೆಗೆ ದಿಕ್ಸೂಚಿಯಾಗಿದ್ದು ಒಮ್ಮತದಿಂದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. ದಿ.ನಾಗಪ್ಪನವರ ಕಾಲದಿಂದಲೂ ಈ ಭಾಗದಲ್ಲಿ ಜನರು ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಇದನ್ನೇ ಮುಂದುವರೆಸಿ ಈ ಚುನಾವಣೆಯಲ್ಲಿ ಗೆಲವನ್ನು ನಮ್ಮದಾಗಿಸಲು ಎಲ್ಲರೂ ಪಣತೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಪ್ರೊ. ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಗುರುಸ್ವಾಮಿ, ಮುಖಂಡ ದತ್ತೇಶ್ ಕುಮಾರ್, ರಾಜೂಗೌಡ, ವೆಂಕಟಸ್ವಾಮಿ, ಕೆ.ಪಿ.ಶಿವಕುಮಾರ್, ನಾಗೇಂದ್ರ ಮೂರ್ತಿ, ಬಿಜೆಪಿ ಅಭ್ಯರ್ಥಿ ಲೋಕೇಶ್, ಮಹಾದೇವಪ್ಪ, ಗುರುಮಲ್ಲಪ್ಪ, ಮಾತೃಭೂಮಿ ಮೂರ್ತಿ, ವೃಷಭೇಂದ್ರ, ಮಂಡಲ ಅಧ್ಯಕ್ಷ ರಾಜಶೇಖರ್, ಬಾಬು ಲಿಂಗೇಗೌಡ ನಾಗರಾಜು ವೆಂಕಟೇಗೌಡ ಹಾಗೂ ಇನ್ನಿತರ ಕಾರ್ಯಕರ್ತರು ಹಾಜರಿದ್ದರು.







