ಜು.1: ಸಂತ ಅಲೋಶಿಯಸ್ ಕಾಲೇಜು ರಸ್ತೆಯ ಹೆಸರು ಬದಲಾವಣೆ ವಿರುದ್ಧ ಪ್ರತಿಭಟನೆ
ಮಂಗಳೂರು, ಜೂ. 29: ನಗರದ ಹೃದಯ ಭಾಗವಾದ ಹಂಪನ ಕಟ್ಟೆಯಿಂದ ಅಂಬೇಡ್ಕರ್ ವೃತ್ತದವರೆಗೆ ಸಾಗುವ ಪ್ರಮುಖ ರಸ್ತೆಗೆ ಈಗಾಗಲೇ ನಮೂದಿಸಲಾಗಿದ್ದ ಸಂತ ಅಲೋಶಿಯಸ್ ಕಾಲೇಜ್ ರಸ್ತೆ ಎಂಬ ಹೆಸರನ್ನು ಏಕಾಏಕಿಯಾಗಿ ಬದಲಾಯಿಸಲು ಹುನ್ನಾರ ನಡೆದಿದ್ದು, ಇದನ್ನು ವಿರೋಧಿಸಿ ಜುಲೈ 1ರಂದು ಬೆಳಗ್ಗೆ 10 ಗಂಟೆಗೆ ಬಾವುಟ ಗುಡ್ಡೆಯ ಬಸ್ ನಿಲ್ದಾಣದ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ಜರಗಲಿದೆ ಎಂದು 40ನೆ ಕೋರ್ಟ್ ವಾರ್ಡ್ ಅಭಿವೃದ್ಧಿ ಸಮಿತಿಯ ಪ್ರಕಟನೆ ತಿಳಿಸಿದೆ.
ಈ ರಸ್ತೆಗೆ ಪ್ರಾರಂಭದಲ್ಲಿ ಲೈಟ್ ಹೌಸ್ ಹಿಲ್ ರಸ್ತೆ ಎಂಬ ಹೆಸರಿತ್ತು. ಇದೇ ರಸ್ತೆಯಲ್ಲಿ ಜಿಲ್ಲೆಯ ಗಣ್ಯಾತಿಗಣ್ಯರು ವಿದ್ಯಾಭ್ಯಾಸ ಪಡೆದ ಸಂತ ಅಲೋಶಿಯಸ್ ಕಾಲೇಜ್ ಇದ್ದು, ವರ್ಷಕ್ಕೆ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದಿದ್ದಾರೆ. ಈ ಕಾಲೇಜಿಗೆ ಸುಮಾರು 137 ವರ್ಷಗಳ ಇತಿಹಾಸವಿದೆ. ಈ ರಸ್ತೆಗೆ ಸಂತ ಅಲೋಶಿಯಸ್ ಕಾಲೇಜ್ ರಸ್ತೆ ಎಂದೇ ನಾಮಕರಣಗೊಂಡಿದ್ದು ಹೆಚ್ಚು ಸೂಕ್ತವಾಗಿದೆ. ಇದನ್ನು ಮಂಗಳೂರಿನ ಸರ್ವ ರೀತಿಯ ಜನತೆ ಒಪ್ಪುವಂತಾಗಿದೆ. ಆದರೆ ಈಗ ಏಕಾಏಕಿಯಾಗಿ ದಿ. ಮುಲ್ಕಿ ಸುಂದರ ರಾಮ ಶೆಟ್ಟಿಯವರ ಹೆಸರನ್ನು ಪ್ರಸ್ತಾಪಿಸಲಾಗಿದ್ದು ತೀರಾ ಅವೈಜ್ಞಾನಿಕವಾಗಿದೆ. ಮಾತ್ರವಲ್ಲದೆ ಏಕಪಕ್ಷೀಯ ತೀರ್ಮಾನವು ಭಾರೀ ಸಂಶಯಕ್ಕೆ ಎಡೆ ಮಾಡಿದೆ. ದಿ. ಮುಲ್ಕಿ ಸುಂದರ ರಾಮ ಶೆಟ್ಟಿಯವರ ವ್ಯಕ್ತಿತ್ವದ ಬಗ್ಗೆ ನಗರದ ಜನತೆಗೆ ಭಾರೀ ಗೌರವವಿದ್ದು ಅವರ ಹೆಸರನ್ನು ನಗರದ ಇನ್ನಿತರ ಪ್ರಮುಖ ಸ್ತೆಗೆ ನಮೂದಿಸಲಿ. ಅದರ ಬದಲು ಯಾವುದೇ ಕಾರಣಕ್ಕೂ ಸಂತ ಅಲೋಶಿಯಸ್ ಕಾಲೇಜ್ ರಸ್ತೆಯ ಹೆಸರನ್ನು ಬದಲಾವಣೆಗೊಳಿಸದಿರಲು ಈ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.





