ಮೊಸುಲ್ ಮಸೀದಿಯನ್ನು ವಶಪಡಿಸಿಕೊಂಡ ಇರಾಕ್ ಸೇನೆ
ಐಸಿಸ್‌ನ ‘ಖಲೀಫ ಸಾಮ್ರಾಜ್ಯ’ದ ಅಂತ್ಯ
ಮೊಸುಲ್ (ಇರಾಕ್), ಜೂ. 29: ಐಸಿಸ್ ಮೂರು ವರ್ಷಗಳ ಹಿಂದೆ ‘ಖಲೀಫ ಸಾಮ್ರಾಜ್ಯ’ವನ್ನು ಘೋಷಿಸಿದ್ದ ಮೊಸುಲ್‌ನ ಮಸೀದಿಯನ್ನು ಸರಕಾರಿ ಪಡೆಗಳು ಗುರುವಾರ ವಶಪಡಿಸಿಕೊಂಡಿವೆ ಎಂದು ಇರಾಕ್ ಸೇನೆ ತಿಳಿಸಿದೆ.
850 ವರ್ಷಗಳ ಹಳೆಯ ಗ್ರಾಂಡ್ ಅಲ್-ನೂರಿ ಮಸೀದಿಯನ್ನು ವಶಪಡಿಸುವುದರೊಂದಿಗೆ ಇರಾಕಿ ಪಡೆಗಳಿಗೆ ಸಾಂಕೇತಿಕ ವಿಜಯ ಲಭಿಸಿದೆ.
ಇರಾಕ್‌ನಲ್ಲಿ ಇಸ್ಲಾಮಿಕ್ ಸ್ಟೇಟ್‌ನ ರಾಜಧಾನಿಯೇ ಆಗಿದ್ದ ಉತ್ತರದ ನಗರ ಮೊಸುಲ್‌ನ್ನು ಮರುವಶಪಡಿಸಿಕೊಳ್ಳಲು ಇರಾಕಿ ಪಡೆಗಳು ಎಂಟು ತಿಂಗಳಿಗೂ ಅಧಿಕ ಸಮಯದಿಂದ ಹೋರಾಟ ನಡೆಸಿವೆ.
ಕಳೆದ ವಾರ ಅಮೆರಿಕದ ಬೆಂಬಲಿತ ಇರಾಕಿ ಪಡೆಗಳು ಮುನ್ನುಗ್ಗಿ ಬರುತ್ತಿದ್ದಂತೆಯೇ, ಭಯೋತ್ಪಾದಕರು ಮಧ್ಯಕಾಲೀನ ಮಸೀದಿ ಮತ್ತು ಅದರ ಪ್ರಸಿದ್ಧ ಮಿನಾರನ್ನು ಸ್ಫೋಟಿಸಿದ್ದರು.
ಹಳೆ ನಗರದ ಬೆರಳೆಣಿಕೆಯ ಉಪನಗರಗಳಲ್ಲಿ ಭಯೋತ್ಪಾದಕರು ಸಿಕ್ಕಿಹಾಕಿಕೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಯುದ್ಧ ಕೊನೆಗೊಳ್ಳಲಿದೆ ಎಂಬ ನಿರೀಕ್ಷೆಯನ್ನು ಇರಾಕ್ ಅಧಿಕಾರಿಗಳು ಹೊಂದಿದ್ದಾರೆ.
Next Story





