ಕೇರಳದ ಗೂಂಡಾ ಸಂಸ್ಕೃತಿ ಕರ್ನಾಟಕಕ್ಕೆ ತರುತ್ತಿದ್ದಾರೆ: ಬಿಜೆಪಿ ವಕ್ತಾರ ಸುರೇಶ್‌ಕುಮಾರ್

ಬೆಂಗಳೂರು, ಜೂ.29: ಮೇ 18ರಂದು ಪ್ರಾರಂಭವಾದ ಬಿಜೆಪಿಯ ಜನ ಸಂಪರ್ಕ ಯಾತ್ರೆ 27 ಜಿಲ್ಲೆಗಳನ್ನು ಪೂರೈಸಿದ್ದು, ಕೊಡಗು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಯಾತ್ರೆ ಪ್ರಾರಂಭಿಸುತ್ತೇವೆ ಎಂದು ಮಾಜಿ ಸಚಿವ, ಬಿಜೆಪಿ ವಕ್ತಾರ ಸುರೇಶ್‌ಕುಮಾರ್ ಹೇಳಿದ್ದಾರೆ.
ಗುರುವಾರ ವಿಧಾನಸೌಧದ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ಜನ ಸಂಪರ್ಕ ಯಾತ್ರೆಯಿಂದಾಗಿ ಜನರಿಗೆ ಈಗಾಗಲೇ ಸ್ಪಷ್ಟ ಸಂದೇಶ ಹೋಗಿದ್ದು, ಬಿಜೆಪಿ ಮುಖಂಡರೂ ಜನರ ಸಮಸ್ಯೆಗಳನ್ನು ಈ ಅಭಿಯಾನದಲ್ಲಿ ಆಲಿಸಿದ್ದಾರೆ ಎಂದು ಹೇಳಿದರು.
ಜುಲೈ 1ರಿಂದ ವಿನೂತನವಾಗಿ ವಿಸ್ತಾರಕ ಅಭಿಯಾನ ಯೋಜನೆ ಪ್ರಾರಂಭವಾಗಲಿದ್ದು, ರಾಜ್ಯದ 54,400 ಮತಗಟ್ಟೆಗಳಿಗೆ ಬಿಜೆಪಿಯ ಕಾರ್ಯಕರ್ತರು ಭೇಟಿ ನೀಡಿ, ಅಲ್ಲಿಂದ ಮನೆ ಮನೆಗೆ ತೆರಳಿ ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಲಿದ್ದಾರೆ. ಹಾಗೂ ರಾಜ್ಯ ಸರಕಾರದ ದುರಾಡಳಿತದ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ಅತಿ ಉತ್ಸಾಹ ಗಡಿಯನ್ನು ದಾಟಿ ಬಂದು ಬೆದರಿಕೆ ಹಾಕುವ ಮಟ್ಟಕ್ಕೆ ಬೆಳೆದಿದೆ. ಹಾಗೂ ನಿನ್ನೆ ನಡೆದ ಯುವ ಕಾಂಗ್ರೆಸ್ ಮತ್ತು ವಿದ್ಯಾರ್ಥಿ ಕಾಂಗ್ರೆಸ್‌ನ ಪದಾಧಿಕಾರಿಗಳ ಸಭೆಯಲ್ಲಿ ವೇಣುಗೋಪಾಲ್ ಅವರೇ ಆರೆಸ್ಸೆಸ್ ಹಾಗೂ ಎಬಿವಿಪಿಗೆ ಒಲವು ತೋರಿಸುವ ಕಾಲೇಜುಗಳ ಪ್ರಿನ್ಸಿಪಾಲ್‌ರ ಪಟ್ಟಿಯನ್ನು ನೀಡುವಂತೆ ವಿದ್ಯಾರ್ಥಿ ಕಾಂಗ್ರೆಸ್ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇದರಿಂದ, ವಿದ್ಯಾರ್ಥಿಗಳಿಗೆ ಬಹುದೊಡ್ಡ ಹೊಡೆತ ಬೀಳಲಿದೆ. ಹಾಗೂ ವೇಣುಗೋಪಾಲ್ ಅವರು ಕೇರಳದ ಗೂಂಡಾ ಸಂಸ್ಕೃತಿಯನ್ನು ಯಾವುದೇ ಕಾರಣಕ್ಕೂ ಇಲ್ಲಿಗೆ ತರಬಾರದು ಎಂದು ಹೇಳಿದರು.
ರೇರಾ ಕಾಯ್ದೆಯನ್ನು ಬಡವರು ಹಾಗೂ ಮಧ್ಯಮ ವರ್ಗದವರನ್ನು ಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಜಾರಿಗೆ ತಂದಿದೆ. ಆದರೆ, ಸರಕಾರ ಬಿಲ್ಡರ್ಸ್‌ಗಳಿಗೆ ಮಣಿದು ಈ ಕಾಯ್ದೆಯನ್ನು ಕರ್ನಾಟಕದಲ್ಲಿ ಸಮರ್ಪಕವಾಗಿ ಜಾರಿಗೆ ತರಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಪೇಜಾವರ ಶ್ರೀಗಳ ಉದ್ದೇಶ ಒಳ್ಳೆಯದು: ಪೇಜಾವರ ಶ್ರೀಗಳು ಒಳ್ಳೆಯ ಉದ್ದೇಶಕ್ಕಾಗಿ ಮುಸ್ಲಿಮ್ ಬಾಂಧವರಿಗೆ ಇಫ್ತಾರ್ ಕೂಟವನ್ನು ಆಯೋಜಿಸಿದ್ದಾರೆ. ಹೀಗಾಗಿ, ಪೇಜಾವರ ಶ್ರೀಗಳ ದಾರಿಯಲ್ಲಿ ಎಲ್ಲ ನಾಡಿನ ಸಂತರೂ ನಡೆಯಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶಗೌಡ, ಪ್ರಕಾಶ್ ಉಪಸ್ಥಿತರಿದ್ದರು.







