ದ್ವಿತೀಯ ಪಿಯು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ಕುಮಾರಸ್ವಾಮಿ ಜಾಮೀನು ಅರ್ಜಿ ವಜಾ

ಬೆಂಗಳೂರು, ಜೂ.28: ದ್ವಿತೀಯ ಪಿಯು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮೊದಲ ಆರೋಪಿ ಕುಮಾರಸ್ವಾಮಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರ ಜಾಮೀನು ಕೋರಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮತ್ತೊಂದು ನ್ಯಾಯಪೀಠ ವಜಾಗೊಳಿಸಿ ಜಾಮೀನು ನೀಡಲು ನಿರಾಕರಿಸಿತ್ತು. ಇದೀಗ ಜಾಮೀನು ಕೋರಿ ಮತ್ತೆ ಸಲ್ಲಿಸಿರುವ ಈ ಅರ್ಜಿಯನ್ನು ಪುರಸ್ಕರಿಸಲಾಗದು. ಅಗತ್ಯವಿದ್ದರೆ ಈ ಹಿಂದೆ ಜಾಮೀನು ನಿರಾಕರಿಸಿದ್ದ ಹೈಕೋರ್ಟ್ ಆದೇಶದ ಕುರಿತು ಮೇಲ್ಮನವಿ ಸಲ್ಲಿಸಬಹುದು ಎಂದು ತಿಳಿಸಿತು.ಇದರಿಂದ ಕುಮಾರಸ್ವಾಮಿ ಪರ ವಕೀಲರು ಅರ್ಜಿಯನ್ನು ಹಿಂಪಡೆಯುವುದಾಗಿ ತಿಳಿಸಿದರು. ಹೀಗಾಗಿ, ನ್ಯಾಯಪೀಠ ಅರ್ಜಿ ವಜಾಗೊಳಿಸಿತು.
2015-16ನೆ ಸಾಲಿನ ದ್ವಿತೀಯ ಪಿಯು ಪರೀಕ್ಷೆ ವೇಳೆ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಪ್ರಕರಣದಲ್ಲಿ ಸಿಐಡಿ ಪೊಲೀಸರು ಕುಮಾರಸ್ವಾಮಿಯನ್ನು ಬಂಧಿಸಿದ್ದರು. ನಂತರ ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಳಿಸಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿ ಕುಮಾರಸ್ವಾಮಿಯನ್ನು ಮೊದಲನೇ ಆರೋಪಿಯನ್ನಾಗಿ ಮಾಡಲಾಗಿತ್ತು. ದೋಷಾರೋಪ ಪಟ್ಟಿಯಲ್ಲಿ ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವ ಬಲವಾದ ಸಾಕ್ಷಧಾರಗಳನ್ನು ತನಿಖಾಧಿಕಾರಿಗಳು ಒದಗಿಸದ ಕಾರಣ ಜಾಮೀನು ನೀಡುವಂತೆ ಆರೋಪಿ ಅರ್ಜಿಯಲ್ಲಿ ಕೋರಿದ್ದರು.







