ನಗರಸಭೆ ಜಟಾಪಟಿ: ಅಧ್ಯಕ್ಷೆ ಸಹಿತ ಮೂವರಿಂದ ದೂರು
ಉಡುಪಿ, ಜೂ.29: ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಇಂದು ನಡೆದ ಜಟಾಪಟಿಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಗೆ ಮೂರು ದೂರುಗಳು ಬಂದಿದ್ದು, ಈ ಬಗ್ಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ನೀಡಿದ ದೂರಿನಲ್ಲಿ ರಾನಿ ಡಿಮೆಲ್ಲೊ ಎಂಬವರು ನಗರಸಭೆ ಸಾಮಾನ್ಯ ಸಭೆಗೆ ಅನುಮತಿ ಇಲ್ಲದೆ ಪ್ರವೇಶ ಮಾಡಿ ಸಭೆಗೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಅದೇ ರೀತಿ ನಗರಸಭೆ ಸದಸ್ಯ ರಮೇಶ್ ಪೂಜಾರಿ, ಸಭೆಗೆ ಆಗಮಿಸಿದ ರಾನಿ ಡಿಮೆಲ್ಲೊ ಅವರನ್ನು ಹೊರಗೆ ಹೋಗಲು ಹೇಳಿದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಸಭೆಯಿಂದ ಹೊರದೂಡಲ್ಪಟ್ಟ ರಾನಿ ಡಿಮೆಲ್ಲೊ ನೀಡಿದ ದೂರಿನಲ್ಲಿ, ನಗರ ಸಭೆ ಸದಸ್ಯೆ ಗೀತಾ ಶೇಟ್ ಬರಲು ಹೇಳಿದಕ್ಕೆ ಸಭೆಗೆ ತೆರಳಿದ್ದೆ. ಅಲ್ಲಿ ಇಬ್ಬರು ರಮೇಶ್ ಎಂಬವರು ಹಾಗೂ ಇತರ ಇಬ್ಬರು ನನ್ನನ್ನು ಹೊರಹಾಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
‘ನಗರಸಭೆ ಸಾಮಾನ್ಯಸಭೆಯ ಘಟನೆಗೆ ಸಂಬಂಧಿಸಿ ಮೂರು ದೂರುಗಳು ಬಂದಿದ್ದು, ಅದನ್ನು ಸ್ವೀಕರಿಸಲಾಗಿದೆ. ಆದರೆ ಅಸಂಜ್ಞೆಯ ಪ್ರಕರಣ ಆಗಿರುವುದ ರಿಂದ ನಮಗೆ ಎಫ್‌ಐಆರ್ ದಾಖಲಿಸಲು ಆಗಲ್ಲ. ಅದು ನ್ಯಾಯಾಲಯದ ಮೂಲಕವೇ ಬರಬೇಕು’ ಎಂದು ಪೊಲೀಸರು ತಿಳಿಸಿದ್ದಾರೆ.







