ನಗರಸಭೆ ಘಟನೆ: ನಾಳೆ ಬಿಜೆಪಿ ಪ್ರತಿಭಟನೆ
ಉಡುಪಿ, ಜೂ.29: ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಇಂದು ಆಡಳಿತ ಕಾಂಗ್ರೆಸ್ ಸದಸ್ಯರು ತೋರಿದ ಗೂಂಡಾ ಪ್ರವೃತ್ತಿಯನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಾಳೆ ಬೆಲಗ್ಗೆ 11:00ಗಂಟೆಗೆ ಬಸ್‌ನಿಲ್ದಾಣ ಎದುರಿನ ಕ್ಲಾಕ್‌ಟವರ್ ಬಳಿ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭಾ ಸದಸ್ಯೆಯೊಬ್ಬರ ಅದರಲ್ಲೂ ಆಡಳಿತ ಪಕ್ಷದ ಸದಸ್ಯೆಯ ಮೇಲೆ ಕೆಲವು ಸದಸ್ಯರು ಹಲ್ಲೆ, ದೌರ್ಜನ್ಯ ನಡೆಸಿದ್ದು, ಒಬ್ಬರು ನಾಗರಿಕರನ್ನು ಹೊರದೂಡಿ ಅವರ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ. ನಗರಸಭೆಯ ಇತಿಹಾಸದಲ್ಲೇ ಇದೊಂದು ಕಪ್ಪುಚುಕ್ಕಿ ಎಂದರು.
ಡಾ.ವಿ.ಎಸ್.ಆಚಾರ್ಯ, ಕೆ.ಕೆ.ಪೈಯಂಥವರು ಅಧ್ಯಕ್ಷರಾಗಿದ್ದ ಉಡುಪಿ ನಗರಸಭೆ ಇಂದು ಕಳಂಕಕ್ಕೊಳಗಾಯಿತು ಎಂದು ಹೇಳಿದ ಅವರು, ಈ ಘಟನೆಯ ನೈತಿಕ ಜವಾಬ್ದಾರಿ ಹೊತ್ತು ನಗರಸಭಾ ಅಧ್ಯಕ್ಷರು ರಾಜಿನಾಮೆ ನೀಡಬೇಕು. ಪೌರಾಯುಕ್ತರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು. ನಗರಸಭಾ ಸದಸ್ಯೆ ಗೀತಾ ಸೇಠ್ ಹಾಗೂ ರೋನಿ ಡಿಮೆಲ್ಲೊ ಮೇಲೆ ಹಲ್ಲೆ ನಡೆಸಿದ ನಾಲ್ಕು ಸದಸ್ಯರ ವಿರುದ್ಧ ಪಕ್ಷದಿಂದ ಉಚ್ಛಾಟಿಸಿ, ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಮಟ್ಟಾರು ಆಗ್ರಹಿಸಿದರು.
ಇಂದಿನ ಈ ಘಟನೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ನಾಳೆ ಪ್ರತಿಭಟನೆ ನಡೆಸಲಿದೆ ಎಂದು ಮಟ್ಟಾರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮಾಜಿ ಶಾಸಕ ಕೆ.ರಘುಪತಿ ಭಟ್, ಯಶ್ಪಾಲ್ ಸುವರ್ಣ, ಸುರೇಶ್ ನಾಯಕ್ ಕುಯಿಲಾಡಿ, ಕುತ್ಯಾರು ನವೀನ್ ಶೆಟ್ಟಿ, ಕಟಪಾಡಿ ಶಂಕರ ಪೂಜಾರಿ, ಪ್ರಭಾಕರ ಪೂಜಾರಿ ಉಪಸ್ಥಿತರಿದ್ದರು.







