ಬಸ್ ನಿಲ್ದಾಣದಲ್ಲಿ ರಿಕ್ಷಾ ಸ್ಟ್ಯಾಂಡ್ ನಿರ್ಮಾಣಕ್ಕೆ ನಿರ್ಣಯ
ಕಾರ್ಕಳ ಪುರಸಭೆ ಸಾಮಾನ್ಯ ಸಭೆ

ಕಾರ್ಕಳ, ಜೂ.29: ಕಾರ್ಕಳ ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ 'ಬಸ್ಸು ನಿಲ್ದಾಣದಲ್ಲಿ ರಿಕ್ಷಾ ಸ್ಟ್ಯಾಂಡ್ ನಿರ್ಮಾಣ'ಗೊಳಿಸುವಂತೆ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಮುಹಮ್ಮದ್ ಶರೀಫ್ ಮಾತನಾಡಿ, ಈವರೆಗೆ ನಮ್ಮ ಪ್ರತಿಪಕ್ಷದ ಸದಸ್ಯರು ಬಸ್ ನಿಲ್ದಾಣದಲ್ಲಿ ರಿಕ್ಷಾ ನಿಲ್ದಾಣ ರಚಿಸುವ ಕುರಿತು ವಿರೋಧ ವ್ಯಕ್ತಪಡಿಸಿಲ್ಲ. ಆದರೂ ಪುರಸಭೆಯಲ್ಲಿ ಸದಸ್ಯರೊಬ್ಬರು ಏಕೆ ಪ್ರತಿಭಟನೆ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.
ಸದಸ್ಯ ಸುಭಿತ್.ಎನ್.ಆರ್ ಮಾತನಾಡಿ, ಸರಕಾರಿ ಕಚೇರಿಯಲ್ಲಿ ರಾತ್ರಿ ಕುಳಿತು ಧರಣಿ ನಡೆಸಲು ಅವಕಾಶವಿದೆಯೇ..?. ಸದಸ್ಯ ಪ್ರಕಾಶ್ ರಾವ್ ವಿರುದ್ದ ಏಕೆ ಶಿಸ್ತು ಕ್ರಮ ಕೈಗೊಂಡಿಲ್ಲ ? ಎಂದು ಪ್ರಶ್ನಿಸಿದರು.
ಉಪಾಧ್ಯಕ್ಷ ಗಿರಿಧರ್ ನಾಯಕ್ ಮಾತನಾಡಿ, ಪುರಸಭೆ ಮುಖ್ಯಾಧಿಕಾರಿಗಳು ಸದಸ್ಯರುಗಳು ಕೇಳಿದ ಮಾಹಿತಿಯ ಬಗ್ಗೆ ಹಾರಿಕೆಯ ಉತ್ತರ ನೀಡುತ್ತಿರುವುದು ಗೊಂದಲಕ್ಕೆ ಕಾರಣ ಎಂದರು.
ಮುಹಮ್ಮದ್ ಶರೀಫ್ ಮಾತನಾಡಿ, ಸದಸ್ಯರು ಧರಣಿ ನಡೆಸುತ್ತಿರುವ ದಿನದಂದು ರಾತ್ರಿ ಮನೆಗೆ ಹೋದವರು ಯಾಕೆ ನೀವು ವಾಪಾಸ್ಸು ಬಂದಿದ್ದೀರಿ ? ಎಂದು ಮುಖ್ಯಾಧಿಕಾರಿ ಬಳಿ ಪ್ರಶ್ನಿಸಿದರು.
ಮುಖ್ಯಾಧಿಕಾರಿ ಮೇಬಲ್ ಡಿಸೋಜಾ ಮಾತನಾಡಿ, ಈ ಬಗ್ಗೆ ಪೊಲೀಸ್ ಇಲಾಖೆಗೆ ನಾನು ತಿಳಿಸಿದ್ದೇನೆ. ಅಧ್ಯಕ್ಷರಲ್ಲೂ ಮನವಿ ಮಾಡಿದ್ದೇನೆ. ಆದರೆ ಪ್ರಯೋಜನವಾಗಿಲ್ಲ. ಸರಕಾರಿ ಕಛೇರಿ ರಾತ್ರಿ ತೆರೆದಿದ್ದರೆ, ಮುಂದೆ ಏನಾದರೂ ಸಮಸ್ಯೆಯಾದಲ್ಲಿ ನಾನೇ ಹೊಣೆಯಾಗುತ್ತೇನೆ ಎನ್ನುವ ಕಾರಣಕ್ಕೆ ರಾತ್ರಿಯಿಡೀ ಕಾರ್ಕಳದಲ್ಲೇ ಉಳಿಯಬೇಕಾಯಿತು ಎಂದರು.
ಶುಭದ ರಾವ್, ಉಪಾಧ್ಯಕ್ಷ ಗಿರಿಧರ್ ನಾಯಕ್, ಸುಭಿತ್ ಎನ್.ಆರ್ , ಶಶಿಕಲಾ ರಾಣೆ, ಅಶ್ಪಕ್ ಅಹ್ಮದ್ ಈ ಸಂದರ್ಭದಲ್ಲಿ ಮಾತನಾಡಿದರು. ಇದೇ ಸಂದರ್ಭ ಅಹೋರಾತ್ರಿ ಧರಣಿ ಕುಳಿತ ಪ್ರಕಾಶ್ ರಾವ್ ವಿರುದ್ದ ಕ್ರಮ ಕೈಗೊಳ್ಳಬೇಕು, ಪುರಸಭೆ 47 ಸಂಖ್ಯೆ ಎಂ.ಬಿ.ಪುಸ್ತಕ ನಾಪತ್ತೆಯಾಗಿದ್ದು, ಅದನ್ನು ಹುಡುಕಿಕೊಡಬೇಕು ಮತ್ತು ಪುರಸಭೆಯ ಜಾಗವಾದ ಪ್ರವಾಸಿ ಮಂದಿರದ ಬಳಿ ಲೋಕೋಪಯೋಗಿ ಇಲಾಖೆ ನಿರ್ಮಿಸಲು ಮುಂದಾದ ಕಟ್ಟಡದ ಬಗ್ಗೆ ಮಾಹಿತ ಬೇಕು ಎಂದು ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು.
ಅಧ್ಯಕ್ಷರು, ಉಪಾಧ್ಯಕ್ಷರ ಮಾತನ್ನು ಲೆಕ್ಕಿಸದೆ ಪ್ರತಿಭಟಿಸಿದ ಪ್ರಕಾಶ್ ರಾವ್ ವಿರುದ್ಧ ಕ್ರಮ ಕೈಗೊಳ್ಳಲು ನವೀನ್ ದೇವಾಡಿಗ ಒತ್ತಾಯಿಸಿದರು. ಶಿಸ್ತು ಕ್ರಮ ಕೈಗೊಳ್ಳುವಂತೆ ಶುಭದ ರಾವ್ ಆಗ್ರಹಿಸಿದರು. ಬಳಿಕ ಸದಸ್ಯರು ಪುರಸಭೆಯ ಅನುಮತಿ ಪಡೆಯದೆ ಅಹೋರಾತ್ರಿ ಧರಣಿ ನಡೆಸಿರುವ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ನಿರ್ಣಯಿಸಲಾಯಿತು.
ಪುರಸಭೆ ಅಧ್ಯಕ್ಷೆ ಅನಿತಾ ಅಂಚನ್ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಗಿರಿಧರ್ ಕಾಮತ್, ಸ್ಥಾಯಿ ಸಮಿತಿಯ ಅಧ್ಯಕ್ಷ ಅಕ್ಷಯ್ ರಾವ್, ಮುಖ್ಯಾಧಿಕಾರಿ ಮೇಬಲ್ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.







