ರ‍್ಯಾಂಕಿಂಗ್: ಶ್ರೀಕಾಂತ್‌ಗೆ ಅಗ್ರ 10ರಲ್ಲಿ ಸ್ಥಾನ

ಹೊಸದಿಲ್ಲಿ, ಜೂ.29: ಕಿಡಂಬಿ ಶ್ರೀಕಾಂತ್ ಕಳೆದ ಹತ್ತು ತಿಂಗಳ ಅವಧಿಯಲ್ಲಿ ಬಿಡಬ್ಲುಎಫ್ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ರ‍್ಯಾಂಕಿಂಗ್ನಲ್ಲಿ ಮೊದಲ ಬಾರಿ ಅಗ್ರ 10ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಸೂಪರ್ ಸಿರೀಸ್ ಫೈನಲ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ಚೆನ್ ಲಾಂಗ್‌ರನ್ನು 22-20, 21-6 ಅಂತರದಲ್ಲಿ ಮಣಿಸಿ ಪ್ರಶಸ್ತಿ ಎತ್ತಿದ ಒಂದು ವಾರದ ಬಳಿಕ ಶ್ರೀಕಾಂತ್ ಅಗ್ರ 10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಕಳೆದ ರವಿವಾರ ಇಂಡೋನೇಷ್ಯಾ ಓಪನ್ ಫೈನಲ್‌ನಲ್ಲಿ ಶ್ರೀಕಾಂತ್ ಅವರು ಜಪಾನ್‌ನ ಕಝುಮಸಾ ಸಕಾಯ್ ವಿರುದ್ಧ 21-11, 21-19 ಅಂತರದಲ್ಲಿ ಜಯ ಗಳಿಸಿದ್ದರು. ಇದರೊಂದಿಗೆ ಶ್ರೀಕಾಂತ್ ಸತತ ಎರಡು ಸೂಪರ್ ಸಿರೀಸ್ ಪ್ರಶಸ್ತಿ ಬಾಚಿಕೊಂಡ ಮೊದಲ ಭಾರತದ ಆಟಗಾರ ಎನಿಸಿಕೊಂಡಿದ್ದರು.
24ರ ಹರೆಯದ ಶ್ರೀಕಾಂತ್ 2016 ಅಕ್ಟೋಬರ್‌ನಲ್ಲಿ ಅಗ್ರ 10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.ರಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಹಿನ್ನೆಲೆಯಲ್ಲಿ ಅಗ್ರ 10ರಲ್ಲಿ ಸ್ಥಾ ತನ್ನದಾಗಿಸಿಕೊಂಡಿದ್ದರು. 2015 ಜೂನ್‌ನಲ್ಲಿ ಶ್ರೀಕಾಂತ್ ನಂ.3 ಸ್ಥಾನ ಪಡೆಯುವ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದ್ದರು.
ಆಂಧ್ರ ಪ್ರದೇಶ ಸರಕಾರದಿಂದ 50 ಲಕ್ಷ ರೂ. ಬಹುಮಾನ
ಆಸ್ಟ್ರೇಲಿಯನ್ ಓಪನ್ ಸೂಪರ್ ಸಿರೀಸ್ ಮತ್ತು ಇಂಡೋನೇಷ್ಯಾ ಓಪನ್ ಸೂಪರ್ ಸಿರೀಸ್ ಜಯಿಸಿದ ಕೆ.ಶ್ರೀಕಾಂತ್ ಅವರಿಗೆ ಆಂಧ್ರ ಪ್ರದೇಶದ ಮುಖ್ಯ ಮಂತ್ರಿ ಎನ್.ಚಂದ್ರಬಾಬು ನಾಯ್ಡು 50 ಲಕ್ಷ ರೂ.ನಗದು ಬಹುಮಾನ ನೀಡಿ ಗೌರವಿಸಿದರು.
ವಿಜಯವಾಡದ ತುಮ್ಮಾಲಪಳ್ಳಿ ಕಲಾಕ್ಷೇತ್ರಂನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರು ಶ್ರೀಕಾಂತರನ್ನು ರಾಜ್ಯ ಸರಕಾರದ ಪರವಾಗಿ ಗೌರವಿಸಿದರು.
ಇದೇ ವೇಳೆ ಶ್ರೀಕಾಂತ್‌ಗೆ ಗ್ರೂಪ್ 1 ಆಫೀಸರ್ ಹುದ್ದೆ ನೀಡುವ ಬಗ್ಗೆ ಮುಖ್ಯ ಮಂತ್ರಿ ನಾಯ್ಡು ಪ್ರಕಟಿಸಿದರು. ಶ್ರೀಕಾಂತ್ ಕೋಚ್ ಪಿ. ಗೋಪಿಚಂದ್ ಅವರಿಗೆ 15 ಲಕ್ಷ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಸ್ಥಳೀಯ ಕ್ರೀಡಾಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಅಮರಾವತಿಯಲ್ಲಿ ಸ್ಪೋರ್ಟ್ಸ್ ವಿವಿ ಸ್ಥಾಪನೆಯ ಭರವಸೆ ನೀಡಿದ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು ಅವರು ವಿಶಾಖಪಟ್ಟಣ ಮತ್ತು ತಿರುಪತಿಯಲ್ಲಿ ಕ್ರೀಡಾಪಟುಗಳಿಗೆ ಕೋಚಿಂಗ್ ಸೆಂಟರ್ ತೆರೆಯಲಾಗುವುದು. ಶ್ರೀಕಾಂತ್‌ಗೆ ವಿದೇಶಿ ಕೋಚ್ ಮೂಲಕ ತರಬೇತಿ ಪಡೆಯಲು ರಾಜ್ಯ ಸರಕಾರದಿಂದ ನೆರವು ನೀಡುವುದಾಗಿ ತಿಳಿಸಿದರು.
ಶ್ರೀಕಾಂತ್ ಅವರು ಮುಖ್ಯ ಮಂತ್ರಿಗೆ ಬ್ಯಾಡ್ಮಿಂಟನ್ ರ‍್ಯಾಕೆಟ್ ಒಂದನ್ನು ಸ್ಮರಣಿಯಾಗಿ ನೀಡಿದರು.‘‘ ನಾನು ಈ ವರೆಗೆ ಆಂಧ್ರಪ್ರದೇಶದ ಪರ ಆಡುತ್ತಿದ್ದೇನೆ. ಮುಂದೆಯೂ ಆಂಧ್ರ ಪ್ರದೇಶ ಪರ ಆಡುವೆನು’’ ಎಂದರು.







