ಜಾನುವಾರು ಅಧಿಸೂಚನೆ ಪ್ರಶ್ನಿಸಿ ಸುಪ್ರೀಮ್‌ನಲ್ಲಿ ಪಿಐಎಲ್ ದಾಖಲು

ಹೊಸದಿಲ್ಲಿ,ಜೂ.29: ವಧೆಗಾಗಿ ಜಾನುವಾರು ಮಾರುಕಟ್ಟೆಗಳಿಂದ ಜಾನುವಾರುಗಳ ಖರೀದಿ ಮತ್ತು ಮಾರಾಟವನ್ನು ನಿಷೇಧಿಸಿರುವ ಕೇಂದ್ರದ ಅಧಿಸೂಚನೆಯು ಧರ್ಮದ ಆಚರಣೆ ಮತ್ತು ಸರಕುಗಳ ಮುಕ್ತ ಸಾಗಾಣಿಕೆ ಸೇರಿದಂತೆ ರಾಜ್ಯಗಳು ಮತ್ತು ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿರುವ ಸಿಪಿಎಂ ಬೆಂಬಲಿತ ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್)ವು, ಈ ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ದಾಖಲಿಸಿದೆ.
ಅಧಿಸೂಚನೆಯು ಆರ್ಥಿಕ ಹಿತಾಸಕ್ತಿಗಳು ಹಾಗೂ ರೈತರು, ಹೈನುಗಾರರು, ಜಾನುವಾರು ವ್ಯಾಪಾರಿಗಳು ಮತ್ತು ಉದ್ಯಮಿಗಳ ಜೀವನೋಪಾಯಕ್ಕೆ ತೊಂದರೆಯ ನ್ನುಂಟು ಮಾಡುತ್ತದೆ ಎಂದೂ ಎಐಕೆಎಸ್ ವಾದಿಸಿದೆ.
ಇತ್ತೀಚಿನ ದಿನಗಳಲ್ಲಿ ಗೋರಕ್ಷಕ ಸಂಘಟನೆಗಳಿಂದ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಸರಣಿ ದಾಳಿಗಳನ್ನು ಪ್ರಸ್ತಾಪಿಸಿರುವ ಅದು, ಅಧಿಸೂಚನೆಯು ಇಂತಹ ದಾಳಿಗಳ ನಾಯಕರ ಕೈಗಳನ್ನು ಬಲಪಡಿಸುತ್ತದೆ ಎಂದು ಹೇಳಿದೆ.
ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನನ್ ಮುಲ್ಲಾ ಅವರು, ಈ ಅಧಿಸೂಚನೆಯೊಂದಿಗೆ ಕೇಂದ್ರವು ಹಲವಾರು ಹಕ್ಕುಗಳನ್ನು ಉಲ್ಲಂಘಿಸಿದೆ. ಧರ್ಮದ ಆಚರಣೆಯ ಹಕ್ಕನ್ನು ನೀಡುವ ಸಂವಿಧಾನದ 25ನೇ ವಿಧಿಯು ಮೂಲಭೂತ ಹಕ್ಕು ಕೂಡ ಆಗಿದೆ. ಜಾನುವಾರುಗಳನ್ನು ಧಾರ್ಮಿಕ ಉದ್ದೇಶಗಳಿಗಾಗಿ ಬಲಿ ನೀಡಲಾಗುತ್ತದೆ. ಹೀಗಾಗಿ ಮುಖ್ಯವಾಗಿ ಮೂಲಭೂತ ಹಕ್ಕುಗಳನ್ನು ದಮನಿಸಲಾಗುತ್ತದೆ ಎಂದು ಹೇಳಿದರು.







