ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ: ವೆಂಕಟೇಶ್ ಪ್ರಸಾದ್ ಸ್ಪಷ್ಟನೆ
ಸಹಾಯಕ ಕೋಚ್ ಅಥವಾ ಬೌಲಿಂಗ್ ಕೋಚ್ ಸ್ಥಾನಕ್ಕೆ ಸಿದ್ಧ

ಹೊಸದಿಲ್ಲಿ, ಜೂ.29: ಭಾರತದ ಕ್ರಿಕೆಟ್ ತಂಡದ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ ಅವರು ಟೀಮ್ ಇಂಡಿಯಾದ ಪ್ರಧಾನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ. ಆದರೆ ಸಹಾಯಕ ಕೋಚ್ ಅಥವಾ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಲು ಸಿದ್ದ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾನ ಕೋಚ್ ಹುದ್ದೆಗೆ ವೆಂಕಟೇಶ್ ಪ್ರಸಾದ್ ಅರ್ಜಿ ಸಲ್ಲಿಸಿರುವುದಾಗಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿಯ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ತಾನು ಟೀಮ್ ಇಂಡಿಯಾದ ಪ್ರಧಾನ ಕೋಚ್ ಆಕಾಂಕ್ಷಿಯಲ್ಲ. ಆದರೆ ಕೋಚಿಂಗ್ ತಂಡದಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವುದಾಗಿ ಹೇಳಿದ್ದಾರೆ.
‘‘ ರವಿಶಾಸ್ತ್ರಿ , ವೀರೇಂದ್ರ ಸೆಹ್ವಾಗ್ ಅಥವಾ ಬೇರೆ ಯಾರಾದರೂ ಟೀಮ್ ಇಂಡಿಯಾದ ಪ್ರಧಾನ ಕೋಚ್ ಆಗಿ ನೇಮಕಗೊಂಡರೆ ಅವರ ಕೈಕೆಳಗೆ ಸಹಾಯಕ ಕೋಚ್ ಅಥವಾ ಬೌಲಿಂಗ್ ಕೋಚ್ ಸೇವೆ ಸಲ್ಲಿಸಲು ಆಸಕ್ತಿ ನನಗೆ ಆಸಕ್ತಿ ಇದೆ’’ ಎಂದು ಹೇಳಿದ್ದಾರೆ.
ವೆಂಕಟೇಶ್ ಪ್ರಸಾದ್ ಈ ಹಿಂದೆ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
47ರ ಹರೆಯದ ಪ್ರಸಾದ್ ಟೀಮ್ ಇಂಡಿಯಾದ ಪರ 33 ಟೆಸ್ಟ್ ಮತ್ತು 162 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಏಳು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಟೆಸ್ಟ್‌ನಲ್ಲಿ 96 ಮತ್ತು ಏಕದಿನ ಕ್ರಿಕೆಟ್‌ನಲ್ಲಿ 196 ವಿಕೆಟ್‌ಗಳನ್ನು ಪಡೆದಿದ್ದರು.
ಕಳೆದ ಮೂರು ವರ್ಷಗಳಿಂದ ಭಾರತದ ಜೂನಿಯರ್ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅಧಿಕಾರದ ಅವಧಿ ಮುಂದಿನ ಸೆಪ್ಟಂಬರ್‌ನಲ್ಲಿ ಕೊನೆಗೊಳ್ಳಲಿದೆ.
ಪ್ರಸ್ತುತ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್‌ನ್ನು ಹೊಂದಿದ್ದು, ಸಂಜಯ್ ಬಂಗಾರ್ ಬ್ಯಾಟಿಂಗ್ ಕೋಚ್ ಮತ್ತು ಆರ್.ಶ್ರೀಧರ್ ಫೀಲ್ಡಿಂಗ್ ಕೋಚಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಬೌಲಿಂಗ್ ಕೋಚ್ ಇಲ್ಲ. ಸ್ಪಿನ್ ಬೌಲಿಂಗ್ ಮಾಂತ್ರಿಕ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಇರುವಾಗ ಭಾರತಕ್ಕೆ ಬೌಲಿಂಗ್ ಕೋಚ್‌ನ ಅಗತ್ಯ ಕಂಡು ಬರಲಿಲ್ಲ.
ರವಿಶಾಸ್ತ್ರಿ ತಂಡದ ನಿರ್ದೇಶಕರಾಗಿದ್ದಾಗ ಭರತ್ ಅರುಣ್ ಬೌಲಿಂಗ್ ಕೋಚ್ ಆಗಿದ್ದರು. ಬಂಗಾರ್ ಮತ್ತು ಶ್ರೀಧರ್ ಅವರು ಮಾಡಿಕೊಂಡಿದ್ದ ಒಪ್ಪಂದದ ಅವಧಿ ಕಳೆದ ಮಾರ್ಚ್‌ನಲ್ಲಿ ಕೊನೆಗೊಂಡಿತ್ತು. ಬಳಿಕ ಚಾಂಪಿಯನ್ಸ್ ಟ್ರೋಫಿ ಕೊನೆಗೊಳ್ಳುವ ತನಕ ಅವರಿಗೆ ಮುಂದುವರಿಯಲು ಅವಕಾಶ ನೀಡಲಾಗಿತ್ತು. ಈ ನಡುವೆ ಕುಂಬ್ಳೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ವಿಂಡೀಸ್ ಪ್ರವಾಸ ಮುಗಿಯುವ ತನಕ ಮುಂದುವರಿಯುವ ಬಂಗಾರ್ ಮತ್ತು ಶ್ರೀಧರ್ ಅವರಿಗೆ ತಮ್ಮ ಸ್ಥಾನಗಳಲ್ಲಿ ಮುಂದುವರಿಯಲು ಬಿಸಿಸಿಐ ಅವಕಾಶ ಕಲ್ಪಿಸಿದೆ.
ವೆಂಕಟೇಶ್ ಪ್ರಸಾದ್ 2016ರಲ್ಲಿ ನಿರ್ದೇಕರಾಗಿದ್ದ ರವಿಶಾಸ್ತ್ರಿ ಅಧಿಕಾರದ ಅವಧಿ ಕೊನೆಗೊಂಡ ಬೆನ್ನಲ್ಲೇ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಪ್ರಸಾದ್ ಅರ್ಜಿ ಸಲ್ಲಿಸಿದ್ದರು. ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಮುಂದೆ ಸಂದರ್ಶನಕ್ಕೆ ಹಾಜರಾಗಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ಪ್ರಸಾದ್ ಹೆಸರು ಇರಲಿಲ್ಲ.
ಪ್ರಸಾದ್ ಉತ್ತರ ಪ್ರದೇಶ ರಣಜಿ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಭುವನೇಶ್ವರ ಕುಮಾರ್ ಅವರು ಪ್ರಸಾದ್ ಕೈಕೆಳಗೆ ತರಬೇತಿ ಪಡೆದವರು. ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕ್ರಿಕೆಟ್ ತಂಡ ಪ್ರಸಾದ್ ಅವರಿಂದ ನೆರವು ಪಡೆದಿದೆ.
ಕರ್ನಾಟಕದ ಮಾಜಿ ವೇಗಿ ಪ್ರಸಾದ್ 2007ರಲ್ಲಿ ಭಾರತದ ಬೌಲಿಂಗ್ ಕೋಚ್ ಆಗಿದ್ದರು. ಅವರು ಕೋಚ್ ಆಗಿದ್ದಾಗ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿತ್ತು.







