ದಕ್ಷಿಣ ಆಫ್ರಿಕದಲ್ಲಿ ಏಕದಿನ , ನಾಲ್ಕು ದಿನ ಪಂದ್ಯಗಳ ಸರಣಿ: ಮನೀಷ್ ಪಾಂಡೆ, ನಾಯರ್‌ಗೆ ಭಾರತ ‘ಎ’ ತಂಡದ ಸಾರಥ್ಯ

ಹೊಸದಿಲ್ಲಿ, ಜೂ.29: ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನಲ್ಲಿ ಗಾಯಗೊಂಡ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಸೇವೆಯಿಂದ ವಂಚಿತರಾಗಿದ್ದ ಕರ್ನಾಟಕದ ದಾಂಡಿಗ ಮನೀಷ್ ಪಾಂಡೆ ಇದೀಗ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಅವರಿಗೆ ದಕ್ಷಿಣ ಆಫ್ರಿಕದಲ್ಲಿ ನಡೆಯಲಿರುವ ಮೂರು ರಾಷ್ಟ್ರಗಳ ಏಕದಿನ ಸರಣಿಗೆ ಭಾರತ ‘ಎ’ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆ.
ಬಿಸಿಸಿಐ ಆಯ್ಕೆ ಸಮಿತಿಯು ಸಭೆ ಸೇರಿ ಮೂರು ರಾಷ್ಟ್ರಳ ಏಕದಿನ ಸರಣಿಗೆ ಮತ್ತು ನಾಲ್ಕು ದಿನಗಳ ಪಂದ್ಯಗಳಿಗೆ ತೆರಳಲಿರುವ ಭಾರತ ‘ಎ’ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿದೆ.
ಭಾರತ ‘ಎ’ ತಂಡವನ್ನು ಮನೀಷ್ ಪಾಂಡೆ ಮೂರು ರಾಷ್ಟ್ರಗಳ ಏಕದಿನ ಸರಣಿಯಲ್ಲಿ ನಾಯಕರಾಗಿ ಮುನ್ನಡೆಸುವರು. ನಾಲ್ಕು ದಿನಗಳ ಪಂದ್ಯಗಳಿಗೆ ಪಾಂಡೆ ಅವರ ಕರ್ನಾಟಕದ ರಣಜಿ ತಂಡದ ಸಹ ಆಟಗಾರ ಕರುಣ್ ನಾಯರ್ ನಾಯಕರಾಗಿ ಆಯ್ಕೆಯಾಗಿದ್ದಾರೆ.
ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ‘ಎ’, ಆತಿಥೇಯ ದಕ್ಷಿಣ ಅಫ್ರಿಕ ’ಎ’ ಮತ್ತು ಆಸ್ಟ್ರೇಲಿಯ ‘ಎ’ ತಂಡಗಳು ಭಾಗವಹಿಸಲಿದೆ.
ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನೀಡಿರುವ ಪ್ರದರ್ಶನವನ್ನು ಗುರುತಿಸಿ ಯುವ ಆಟಗಾರರಿಗೆ ಏಕದಿನ ಸರಣಿಯನ್ನಾಡಲು ತೆರಳಿರುವ ಭಾರತ ‘ಎ’ ತಂಡದಲ್ಲಿ ಅವಕಾಶ ನೀಡಲಾಗಿದೆ.
ಕರುಣ್ ನಾಯರ್ ಅವರು ಟೆಸ್ಟ್‌ನಲ್ಲಿ ಎರಡನೆ ತ್ರಿಶತಕ ದಾಖಲಿಸಿದ ಭಾರತದ ದಾಂಡಿಗ.ಅವರ ತಂಡದಲ್ಲಿ ಮುಂಬೈನ ಯುವ ದಾಂಡಿಗ ಶ್ರೇಯಸ್ ಅಯ್ಯರ್ ಸ್ಥಾನ ಪಡೆದಿದ್ದಾರೆ. ಅಯ್ಯರ್ ಧರ್ಮಶಾಲಾದಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ನಾಲ್ಕನೆ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದರು. ಇವರು ಎರಡೂ ತಂಡಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಹೈದರಾಬಾದ್‌ನ ಯುವ ವೇಗಿ ಮುಹಮ್ಮದ್ ಸಿರಾಜ್ 2016-17ನೆ ಸಾಲಿನ ರಣಜಿಯಲ್ಲಿ 41 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಪಡೆದ 3ನೆ ಬೌಲರ್ ಎನಿಸಿಕೊಂಡಿದ್ದರು. ಸಿರಾಜ್, ಜಯಂತ್ ಯಾದವ್, ಯಜುವೇಂದ್ರ ಚಾಹಲ್ ಮತ್ತು ಅಕ್ಷರ್ ಪಟೇಲ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಕೃನಾಲ್ ಪಾಂಡ್ಯ ಮತ್ತು ಸಿರಾಜ್‌ಗೆ ಮೊದಲ ಬಾರಿ ಭಾರತ’ಎ’ ತಂಡದಲ್ಲಿ ಅವಕಾಶ ದೊರೆತಿದೆ.
ತ್ರಿಕೋನ ಸರಣಿಗೆ ರಿಷಭ್ ಪಂತ್ ವಿಕೆಟ್ ಕೀಪರ್. ನಾಲ್ಕು ದಿನಗಳ ಪಂದ್ಯಗಳಿಗೆ ಝಾರ್ಕಂಡ್‌ನ ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಿ ಸೇವೆ ಸಲ್ಲಿಸಲಿದ್ದಾರೆ. ಕೇರಳದ ಉದಯೋನ್ಮುಖ ಆಟಗಾರ ಬಾಸಿಲ್ ಥಾಂಪಿ, 87.33 ಸರಾಸರಿಯಂತೆ 1,310 ರನ್ ದಾಖಲಿಸಿ ಗುಜರಾತ್‌ಗೆ ಮೊದಲ ಬಾರಿ ರಣಜಿ ಟ್ರೋಫಿಯನ್ನು ಎತ್ತಲು ಕೊಡುಗೆ ನೀಡಿದ ಪ್ರಿಯಾಂಕ್ ಪಾಂಚಾಲ್, ರಣಜಿಯಲ್ಲಿ 56 ವಿಕೆಟ್ ಪಡೆಯುವುದರೊಂದಿಗೆ ಸತತ ಎರಡನೆ ಬಾರಿ ರಣಜಿಯಲ್ಲಿ ಗರಿಷ್ಠ ವಿಕೆಟ್ ಗಿಟ್ಟಿಸಿಕೊಂಡಿದ್ದ ಝಾರ್ಖಂಡ್‌ನ ಸ್ಪಿನ್ನರ್ ಶಾಹ್‌ಬಾಝ್ ನದೀಮ್ ಅವಕಾಶ ಪಡೆದಿದ್ದಾರೆ.
ಟೆಸ್ಟ್ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಜಯಂತ್ ಯಾದವ್, ಶಾರ್ದೂಲ್ ಠಾಕೂರ್, ಮತ್ತು ಅಭಿನವ್ ಮುಕುಂದ್ ಅವರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಅವಕಾಶ ದೊರೆಯಲಿದೆ.
ಭಾರತದ ಉಭಯ ತಂಡಗಳಿಗೆ ಆಯ್ಕೆಯಾಗಿರುವ ಆಟಗಾರರ ವಿವರ ಇಂತಿವೆ.
ಮೂರು ರಾಷ್ಟ್ರಗಳ ಏಕದಿನ ಸರಣಿ: ಮನೀಷ್ ಪಾಂಡೆ (ನಾಯಕ), ಮನ್‌ದೀಪ್ ಸಿಂಗ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಕರುಣ್ ನಾಯರ್, ಕೃನಾಲ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ವಿಜಯ್ ಶಂಕರ್, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಜಯಂತ್ ಯಾದವ್, ಬಾಸಿಲ್ ಥಾಂಪಿ, ಮುಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಸಿದ್ಧಾರ್ಥ ಕೌಲ್.
ಪೋರ್-ಡೇ ಗೇಮ್ಸ್: ಕರುಣ್ ನಾಯರ್(ನಾಯಕ), ಪಿ.ಕೆ. ಪಾಂಚಾಲ್, ಅಭಿನವ್ ಮುಕುಂದ್, ಶ್ರೇಯಸ್ ಅಯ್ಯರ್, ಅಂಕಿತ್ ಬಾವ್ನೆ, ಸುದೀಪ್ ಚಟರ್ಜಿ, ಇಶಾನ್ ಕಿಶನ್(ವಿಕೆಟ್ ಕೀಪರ್), ಹನುಮ ವಿಹಾರಿ, ಜಯಂತ್ ಯಾದವ್,ಶಾಹ್‌ಬಾಝ್ ನದೀಮ್, ನವ್‌ದೀಪ್ ಸೈನಿ, ಮುಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಅನಿಕೇತ್ ಚೌಧರಿ, ಅಂಕಿತ್ ರಜಪೂತ್.







