ಶೈಕ್ಷಣಿಕ ಸಂತೆಯಲ್ಲಿ ಪಿಯು ಶಿಕ್ಷಣ
ಭಾಗ -2

ವಿದ್ಯಾರ್ಥಿಗಳು ಇಲ್ಲಿ ಫೆಸಿಲಿಟೇಟರ್ ಆದ ಕಾರಣಕ್ಕಾಗಿ ಇಲ್ಲಿ ಎಲ್ಲವೂ ಅವರ ಇಚ್ಛೆಯಂತೆಯೇ ನಡೆಯಬೇಕು ಎಂಬ ನಿರೀಕ್ಷೆ ಅವರದು. ಇದರಿಂದಾಗಿ ಶಿಕ್ಷಣಸಂಸ್ಥೆಗಳ ಮಾಲಕರು, ಟ್ರಸ್ಟೀ, ಪ್ರಾಂಶುಪಾಲರು, ಆಡಳಿತಾಧಿಕಾರಿಗಳು- ಹೀಗೆ ಎಲ್ಲರೂ ಪೋಷಕರ ಹಾಗೂ ವಿದ್ಯಾರ್ಥಿಗಳ ತಾಳಕ್ಕೆ ತಕ್ಕಂತೆ ಕುಣಿಯುವವರೇ. ಇಂತಹ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಶಿಕ್ಷಕ ಅವಮಾನಕ್ಕೆ ಒಳಗಾಗುತ್ತಾನೆ, ಮೂರ್ಖನಾಗುತ್ತಾನೆ. ಶಿಸ್ತಿನ ಪಾಠವನ್ನು ಬೋಧಿಸುವ ಮೇಷ್ಟ್ರು ಸಂಸ್ಥೆಯ ಮುಖ್ಯಸ್ಥರಿಂದ ಛೀಮಾರಿಗೊಳಗಾಗುತ್ತಾನೆ ಮತ್ತು ವ್ಯಾಪಾರಿ ಮನೋಭಾವದ ತನ್ನ ಸಹೋದ್ಯೋಗಿ ಶಿಕ್ಷಕನಿಂದಲೇ ನಗೆಪಾಟಲಿಗೆ ಒಳಗಾಗುತ್ತಾನೆ.
ಯಾವ ಸಮಾಜದಲ್ಲಿ ‘ವಿದ್ಯಾಸಂಸ್ಥೆ’ ಎಂಬುದು ಅಂಗಡಿಯಾಗಿ, ವಿದ್ಯೆ ಎಂಬುದು ಮಾರಾಟಕ್ಕಿರುವ ಉತ್ಪನ್ನವಾಗಿ, ‘ಜ್ಞಾನ’ ಎಂಬುದು ಮಾರಾಟಕ್ಕಿರುವ ‘ಸರಕು’ ಆಗಿ ರೂಪಾಂತರಗೊಳ್ಳುವುದೋ ಅಂತಹ ಸಮಾಜ ರೋಗಗ್ರಸ್ತವಾಗಿದೆ ಎಂದರ್ಥ. ಇಂತಹ ಸಮಾಜದಲ್ಲಿರುವ ವ್ಯಕ್ತಿಯೊಬ್ಬನಲ್ಲಿ ದುರಾಸೆ, ವೈಯಕ್ತಿಕ ಪ್ರತಿಷ್ಠೆ, ಅಹಂಕಾರ-ದರ್ಪ, ಮೇಲರಿಮೆ ಇರುತ್ತದೆ. ನೈತಿಕ ಮೌಲ್ಯಗಳು ಇಂತಹ ಸಮಾಜದಲ್ಲಿ ಖಿಲವಾಗುವುದು. ಇಲ್ಲಿ ಶಿಸ್ತು ಅಮುಖ್ಯವಾಗಿ ತನ್ನ ಹೆಸರು, ಸಂಸ್ಥೆಯ ಹೆಸರು ಪತ್ರಿಕೆಯಲ್ಲಿ ಕಾಣಬೇಕು ಎಂಬುದು ಮುಖ್ಯವಾಗುವುದು.
ಇಂತಹ ಆಲೋಚನಾ ಕ್ರಮದಲ್ಲಿ ಇಂದು ಬಹುತೇಕ ಶಿಕ್ಷಣ ಸಂಸ್ಥೆಗಳ ವಾರೀಸುದಾರರು ಇದ್ದಾರೆ ಎಂದು ಅತ್ಯಂತ ವಿಷಾದದಲ್ಲಿ ಹೇಳಬೇಕಾಗಿದೆ. ನಮ್ಮ ಪೋಷಕರು ಇಂತಹ ಸಮಾಜದ ಭಾಗವಾಗಿರುವುದರಿಂದ ಹಣ ಎಷ್ಟಾದರೂ ಪರವಾಗಿಲ್ಲ ವಿಜ್ಞಾನ ವಿಭಾಗದಲ್ಲಿ ಉತ್ತಮ ಫಲಿತಾಂಶ ತಂದು ಕೊಡುತ್ತಿರುವ ಕಾಲೇಜುಗಳಲ್ಲಿ ತಮ್ಮ ಮಕ್ಕಳಿಗೆ ಸೀಟು ಸಿಗಬೇಕೆಂದು ಬಯಸುತ್ತಾರೆ. ಯಾಕೆಂದರೆ ವಿಜ್ಞಾನದ ಓದು ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಅಥವಾ ಸಮಾಜದಲ್ಲಿ ವ್ಯಾಲ್ಯೂ ಹೆಚ್ಚು. ಎಷ್ಟೋ ಬಾರಿ ಮಕ್ಕಳು ವಿಜ್ಞಾನವನ್ನು ಅವರೇ ಇಷ್ಟ ಪಟ್ಟು ಆರಿಸುತ್ತಾರೆ ಅನ್ನುವುದಕ್ಕಿಂತ ಪೋಷಕರ ಇಷ್ಟದಂತೆ ನಡೆದುಕೊಳ್ಳುತ್ತಾರೆ ಎಂಬುದು ಹೆಚ್ಚು ಸರಿ.
ವಿಜ್ಞಾನದ ವಿಷಯಗಳಲ್ಲಿ ಆಸಕ್ತಿ ಇಲ್ಲದ, ತರಗತಿಯಲ್ಲಿ ಕುಳಿತು ಕೊಳ್ಳಲು ಇಷ್ಟ ಇಲ್ಲದ ವಿದ್ಯಾರ್ಥಿಗಳು ವಿಜ್ಞಾನದ ಓದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ, ಒಟ್ಟು ಕಲಿಕೆಯ ಬಗ್ಗೆಯೇ ಅವರಲ್ಲಿ ಅಸಡ್ಡೆ ಇರುವುದರಿಂದ ತಡವಾಗಿ ತರಗತಿಗೆ ಬರುವುದು, ತರಗತಿ ತಪ್ಪಿಸುವುದು, ಅಶಿಸ್ತಿನಿಂದ ವರ್ತಿಸುವುದು, ಮೇಷ್ಟ್ರಿಗೆ ಸವಾಲೆಸೆಯುವುದು - ಇವೆಲ್ಲ ನಡೆಯುತ್ತಿರುತ್ತದೆ. ಆರಂಭದಲ್ಲಿ ಪೋಷಕರಿಗೆ ಕಾಲೇಜಿನಲ್ಲಿ ಸೀಟು ಬೇಕು. ತದನಂತರ ತರಗತಿಯಲ್ಲಿ ಅಧ್ಯಾಪಕರು ಏನು ಮಾತನಾಡಬೇಕು ಏನು ಮಾತನಾಡಬಾರದು ಎಂದು ಪೋಷಕರೇ ನಿರ್ಧರಿಸಿ ಗೂಂಡಾಗಳ ಜೊತೆಗೆ ಸಂಸ್ಥೆಗೆ ಬಂದು ಅಧ್ಯಾಪಕರನ್ನು ಗದರಿಸುತ್ತಾರೆ, ಹೆದರಿಸುತ್ತಾರೆ.
‘ಅಧ್ಯಾಪಕರು ಎಲ್ಲದಕ್ಕೂ ತಮ್ಮ ಮಕ್ಕಳನ್ನೇ ವಿನಾ ಕಾರಣ ಗುರಿ ಮಾಡುತ್ತಾರೆ’ ಎಂದು ಆಪಾದಿಸುತ್ತಾರೆ. ಪೋಷಕರ ಮಾತಿನಲ್ಲಿ ಕಾಣುವ ಧ್ವನಿ ಎಂದರೆ ನಾವು ಬೇಕಾದಷ್ಟು ದುಡ್ಡು ಕೊಟ್ಟಿದ್ದೇವೆ ಹಾಗಿರುವಾಗ ನಮ್ಮ ಮಕ್ಕಳು ಮಾಡುವ ಕೀಟಲೆ, ಪೋಲಿತನವನ್ನು, ಅಶಿಸ್ತನ್ನು ಅಧ್ಯಾಪಕರು ಸಹಿಸಿಕೊಂಡು ಹೋಗತಕ್ಕದ್ದು ಎಂಬ ರೀತಿಯಲ್ಲಿರುತ್ತದೆ. ಎಷ್ಟೋ ಬಾರಿ ಶಿಕ್ಷಣ ಸಂಸ್ಥೆಗಳ ವಾರೀಸುದಾರರು ಕೂಡ ಅಧ್ಯಾಪಕರಿಗೆ ಇದನ್ನೇ ಬೋಧಿಸುತ್ತಾರೆ. ವಾಸ್ತವಿಕವಾಗಿ ಇಂದು ಯಾವ ಅಧ್ಯಾಪಕನೂ ಶಿಕ್ಷಣ ಸಂಸ್ಥೆಯಲ್ಲಿ ಗುರು-ಶಿಷ್ಯ ಸಂಬಂಧದ ಬಗ್ಗೆ ಕನಸು ಕಾಣುತ್ತಿಲ್ಲ. ಇಂದು ಪ್ರತಿಯೊಂದು ಕೂಡಾ ‘ವ್ಯವಹಾರ-ವ್ಯಾಪಾರ’ ಎಂದು ಪ್ರತಿಯೊಬ್ಬನಿಗೂ ಅರಿವಿದೆ.
ಹಾಗಿದ್ದರೂ ಸಮಾಜದ ಉಳಿದೆಲ್ಲ ಕ್ಷೇತ್ರಗಳು ಭ್ರಷ್ಟವಾಗಿದೆ ಎಂದು ಭಾವಿಸಿ ಅಧ್ಯಾಪಕನು ಶಿಕ್ಷಣ ಕ್ಷೇತ್ರದ ಅಧಿಕಾರ ರೂಪವಾಗಿದ್ದಾನೆ, ಆತನೂ ಕೂಡಾ ಕುಲಗೆಟ್ಟಿರುತ್ತಾನೆ ಎಂದು ಹೇಳಲು ಬರುವುದಿಲ್ಲ. ಹಾಗೆ ನೋಡಿದರೆ ಇಂದು ಶಿಕ್ಷಣ ಕ್ಷೇತ್ರದ ಅಧಿಕಾರ ರೂಪ ಅಧ್ಯಾಪಕನಲ್ಲ ಬದಲಾಗಿ ಶಿಕ್ಷಣ ಸಂಸ್ಥೆಗಳ ಮಾಲಕರು. ಅವರು ನಿಜ ಅರ್ಥದಲ್ಲಿ ಭ್ರಷ್ಟರೇ, ಕುಲಗೆಟ್ಟವರೇ. ಅವರಲ್ಲಿ ಅಧ್ಯಾಪಕರ ಬಗ್ಗೆಯಾಗಲೀ ಅಥವಾ ವಿದ್ಯಾರ್ಥಿಗಳ ಬಗ್ಗೆಯಾಗಲೀ ಯಾವುದೇ ಔದಾರ್ಯ ಭಾವ ಇರುವುದಿಲ್ಲ. ಆದರೆ ಪೋಷಕರು ಮತ್ತು ವಿದ್ಯಾರ್ಥಿಗಳು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಹುಚ್ಚರಂತೆ ಕೆರಳಿ ಮೊದಲಿಗೆ ಸಂದೇಹ ಪಡುವುದು ಬಡಪಾಯಿ ಅಧ್ಯಾಪಕನನ್ನು.
ಇವರ ಪ್ರಕಾರ ಅಧ್ಯಾಪಕನೂ ಕೂಡ ಒಬ್ಬ ಪೊಳ್ಳು ಭರವಸೆಗಳನ್ನು ನೀಡುವ ಮಂತ್ರಿಯ ಹಾಗೆ, ಒಬ್ಬ ಭ್ರಷ್ಟ, ಅಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಹಾಗೆ. ಹಾಗಾಗಿ ಅವರಿಗೆ ಅಧ್ಯಾಪಕರಿಂದ ತಮ್ಮ ಮಕ್ಕಳಿಗೆ ಅನ್ಯಾಯವಾಗುತ್ತಿದೆ, ತಮ್ಮ ಮಕ್ಕಳಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ಅತಿಯಾಗಿ ಯೋಚನೆ ಮಾಡಿ ಒಮ್ಮೆಲೆ ಅಧ್ಯಾಪಕನ ಮೇಲೆ ಕುಪಿತರಾಗುತ್ತಾರೆ, ತಮ್ಮ ವ್ಯಗ್ರ ನಡವಳಿಕೆಯನ್ನು ತೋರಿಸುತ್ತ ಅಧ್ಯಾಪಕರೆಲ್ಲರೂ ಕೆಟ್ಟವರು ಎಂಬ ತೀರ್ಮಾನಕ್ಕೆ ಬರುತ್ತಾರೆ. ಇಂದು ಸಮಾಜದೆಲ್ಲೆಡೆ ದಬ್ಬಾಳಿಕೆ, ಅನ್ಯಾಯ, ಅನೀತಿಗಳೇ ತಾಂಡವವಾಡುತ್ತಿರುವುದರಿಂದ ಶೈಕ್ಷಣಿಕ ಸಂಸ್ಥೆಯಲ್ಲೂ ಇದೇ ನಡೆಯುತ್ತಿದೆ ಎಂದು ಭಾವಿಸುತ್ತಾ, ಅಧ್ಯಾಪಕರು ವಿದ್ಯಾರ್ಥಿಗಳನ್ನು ಗುರಿ ಮಾಡುತ್ತಾರೆ ಮತ್ತು ಹಿಂಸಿಸುತ್ತಾರೆ ಎಂದು ತಿಳಿಯುತ್ತಾರೆ. ಅತ್ಯಂತ ತಮಾಷೆಯ ವಿಷಯವೆಂದರೆ ಇಂದು ಸಮಾಜದಲ್ಲಿ ಎಲ್ಲರೂ ಎಲ್ಲವನ್ನೂ ‘ಶೋಷಣೆ’ ಎಂದು ಪರಿಭಾವಿಸುವ ಕ್ರಮವಿದೆ.
ಹಾಗಾಗಿಯೇ ಬಹುತೇಕ ದಿನಪತ್ರಿಕೆಗಳು, ಟಿವಿ ವಾಹಿನಿಗಳು ವಿದ್ಯಾರ್ಥಿಗಳ ಪರವಾಗಿ ನಿಲ್ಲುವಾಗ ಅಧ್ಯಾಪಕನನ್ನು ಭಾವಿಸಿಕೊಳ್ಳುವುದು ತಪ್ಪಿತಸ್ಥನ ನೆಲೆಯಲ್ಲಿ. ಸಂಸ್ಥೆಯ ಮಾಲಕರು ಕೂಡಾ ಅಧ್ಯಾಪಕನ ಪರವಾಗಿ ನಿಂತುಕೊಳ್ಳದೆ ತನ್ನ ಅಧ್ಯಾಪಕ ವೃಂದವನ್ನು ದೂಷಿಸುತ್ತಾರೆ. ತನ್ನ ಸಂಸ್ಥೆಯಲ್ಲಿ ದುಡಿಯುವ ಅಧ್ಯಾಪಕನ ಬಗ್ಗೆ ತಿಳಿದಿದ್ದರೂ, ಆತನದ್ದು ಏನೂ ತಪ್ಪಿಲ್ಲದಿದ್ದರೂ ಸಂಸ್ಥೆ ಆತನನ್ನು ಕೈಬಿಡುತ್ತದೆ. ಕಾಪಾಡಬೇಕಾದವರು ಕೈಚೆಲ್ಲುವುದು ಎಂದರೆ ಇದೇ ತಾನೇ. ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೆ ಅಡ್ಮಿಶನ್ ಆ ಮೂಲಕ ನಂಬರ್ ಮುಖ್ಯವಾದಾಗ ಹೀಗಾಗುವುದು. ಹೀಗಾದಾಗ ಶಿಸ್ತಿನ ವಿಷಯಗಳು ನಗಣ್ಯವಾಗುವುದು. ಸಂಸ್ಥೆಯ ಮುಖ್ಯಸ್ಥರದ್ದು ಎಲ್ಲದಕ್ಕೂ ಒಂದೇ ಸಬೂಬು ‘‘ಈಗ ಕಾಲ ಬದಲಾಗಿದೆ ಬದಲಾದ ಕಾಲಕ್ಕೆ ತಕ್ಕಂತೆ ಅಧ್ಯಾಪಕ ಹೊಂದಿಕೊಳ್ಳಬೇಕು, ಇಂತಹ ವಿಷಯಗಳನ್ನೆಲ್ಲ ದೊಡ್ಡದು ಮಾಡದೆ ಕೆಲವೊಂದನ್ನು ಸರಿಪಡಿಸಲು ಹೋಗಬಾರದು’’.
12ನೆ ಶತಮಾನದ ವಚನಕಾರ ಅಲ್ಲಮ ಪ್ರಭುವಿನ ವಚನವೊಂದರ ಕೊನೆಯ ಭಾಗ ಹೀಗಿದೆ: ‘‘....ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯಿ ಗುಹೇಶ್ವರ, ನಿಮ್ಮಕಾಲದ ಕಟ್ಟಳೆಯ ಕಲಿತನಕ್ಕೆ ಬೆರಗಾದೆನು’’. ಅಂದರೆ ಈ ಕಲಿಯುಗದಲ್ಲಿ ಝಣ ಝಣ ಕಾಂಚಾಣದ ಕರಾಮತ್ತು ಎಲ್ಲೆಡೆ ನಡೆಯುತ್ತಿರುವುದರಿಂದ ಶಿಷ್ಯ ಗುರುವಿಗೆ ಬಡಿದು ಬುದ್ಧಿ ಕಲಿಸುತ್ತಿದ್ದಾನೆ. ಸಂಸ್ಥೆ ಅಧ್ಯಾಪಕನಿಗೆ ನೀತಿಪಾಠವನ್ನೂ, ಬದುಕಿನ ಪಾಠವನ್ನೂ ಹೇಳುತ್ತಿದೆ. ಇದು ಕಾಲ ಮಹಿಮೆಯೋ? ಮನುಷ್ಯ ಮಹಿಮೆಯೋ? ಭವಿಷ್ಯವೇ ನಿರ್ಧರಿಸುತ್ತದೆ. ಒಂದಂತೂ ಸತ್ಯ ಇಂತಹ ಸಂಸ್ಥೆಯ ಐಡಿಯಾಲಜಿಯ ಕೇಂದ್ರದಲ್ಲಿರುವುದು ಲಾಭ ಮತ್ತು ಹೆಸರು.
ತನ್ನ ‘ಶೋ’ ನಡೆಯಬೇಕೆಂದು ಸಂಗತಿಗಳನ್ನು ಬೇಕಾದ ರೀತಿಯಲ್ಲಿ ತಿರುಚುವ, ತನ್ನದೇ ರೀತಿಯಲ್ಲಿ ವ್ಯಾಖ್ಯಾನ ಮಾಡುವ ಚತುರತೆ ಇಂತಹ ಜನರಲ್ಲಿರುತ್ತದೆ. ಇವರು ತಮ್ಮ ಲಾಭಕ್ಕಾಗಿ ಯಾವತ್ತೂ ವಿದ್ಯಾರ್ಥಿಯ ಪರ, ಪೋಷಕರ ಪರ. ಇವರು ತಮ್ಮ ಅಧ್ಯಾಪಕ ವೃಂದದ ಬಗ್ಗೆ ಪೂರ್ವಾಗ್ರಹಪೀಡಿತರು, ಪಕ್ಷಪಾತಿಗಳು. ತಮ್ಮ ಸಂಸ್ಥೆಯಲ್ಲೇ ಪ್ರಾಮಾಣಿಕವಾಗಿ ದುಡಿಯುವ ಬಣ್ಣವಿಲ್ಲದ, ದೈತ್ಯಕಾಯವಿಲ್ಲದ, ನೋಡಲು ಸುಂದರನಾಗಿರದ, ಮೇಲ್ನೋಟದಲ್ಲಿ ಸ್ಮಾರ್ಟ್‌ನೆಸ್ ತೋರಿಸದ ಪಾಪದ ಅಧ್ಯಾಪಕರ ಬಗ್ಗೆ ಇವರಿಗೆ ನಂಬಿಕೆ ಇಲ್ಲ. ಹಾಗೆಯೇ ತಮ್ಮ ಸಂಸ್ಥೆಯಲ್ಲಿರುವ ಇಂತಹದ್ದೇ ಬಡಪಾಯಿ ಮತ್ತು ಓದಿನಲ್ಲಿ ಸ್ವಲ್ಪಹಿಂದೆ ಬಿದ್ದ ವಿದ್ಯಾರ್ಥಿಗಳ ಬಗ್ಗೆಯೂ ಇವರಿಗೆ ಆಸಕ್ತಿ, ಕಾಳಜಿ ಇಲ್ಲ. ಇಂತಹ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ‘ಅಪ್ರಯೋಜಕರು’ ಮತ್ತು ‘ಅನ್‌ಪ್ರೊಡಕ್ಟಿವ್’ ಎಂದು ಭಾವಿಸಿ ಕಣ್ಣೆತ್ತಿಯೂ ನೋಡದ ಮಾಲಕರು ಇಂದು ಶೈಕ್ಷಣಿಕ ಲೋಕವನ್ನು ಆಳುತ್ತಿದ್ದಾರೆ.
ಸಂಸ್ಥೆಗೆ ಲಾಭವಿದೆ, ಇವರು ಪ್ರೊಡಕ್ಟಿವ್ ಎಂದು ತಮ್ಮ ಕಣ್ಣಿಗೆ ಕಾಣಿಸಿಕೊಳ್ಳುವ ಶೋಕೀ ವರ್ತನೆಯ, ತೋರಿಕೆಯ ವ್ಯಕ್ತಿತ್ವದ ಜನರನ್ನು ಮಾತ್ರ ಇವರು ನಂಬುತ್ತಾರೆ. ಇವರು ವಿದ್ಯಾರ್ಥಿಯ ಅಥವಾ ಅಧ್ಯಾಪಕರ ಹೊರನೋಟದ ವರ್ತನೆಯನ್ನೇ ಅತ್ಯಂತಿಕ ಸತ್ಯ ಎಂದು ಭಾವಿಸುತ್ತಾ ವ್ಯಕ್ತಿಯ ಆಂತರ್ಯದ ಶಕ್ತಿ-ಸಾಮರ್ಥ್ಯದ ಬಗ್ಗೆ ಅನುಮಾನವನ್ನು ಹೊಂದಿರುತ್ತಾರೆ. ಹಾಗಾಗಿ ತನ್ನ ಸಂಸ್ಥೆಯ ಅಧ್ಯಾಪಕನು ತನ್ನ ವಿದ್ಯಾರ್ಥಿಗಳಿಗೆ ಹೇಳುವ ಬುದ್ಧಿ ಮಾತು, ನೀತಿ ಪಾಠ, ಸಂಸ್ಕಾರ ಇಂತಹ ಮಾಲಕರಿಗೆ ಕಹಿಯಾಗಿರುತ್ತದೆ. ಯಾವುದೇ ಬಗೆಯ ಮೌಲ್ಯ ಹೊಂದಿರದೆ, ಆದರ್ಶಗಳ ಬಗ್ಗೆ ನಂಬಿಕೆ ಇರದೆ, ಆತ್ಮರತಿಯಲ್ಲೇ ಮುಳುಗಿರುತ್ತಾ, ಲಾಭದ ಲೆಕ್ಕಾಚಾರದಲ್ಲೇ ಸದಾ ಬಿದ್ದಿರುವ ಎಲ್ಲರನ್ನೂ ದೋಚುವ, ವಂಚಿಸುವ, ಮೂರ್ಖರನ್ನಾಗಿಸಲು ಪ್ರಯತ್ನಿಸುವ ಮನುಷ್ಯನ ಧೀಃಶಕ್ತಿಯನ್ನು ಕುಬ್ಜಗೊಳಿಸುವ, ಬೂಟಾಟಿಕೆಯ, ಮುಖವಾಡದ ಇಂತಹ ‘ವಿದ್ಯಾವಂತ’ರಿಗೆ ಕಾಲವೇ ನೀತಿ ಪಾಠವನ್ನು ಕಲಿಸುತ್ತದೆ.







