ಚಹಾ ಅಥವಾ ಕಾಫಿಗಿಂತ ಮೊದಲು ನೀರು ಕುಡಿಯಲೇಬೇಕು.....ಏಕೆ ಗೊತ್ತೇ?
ಜಗತ್ತಿನಲ್ಲಿ ಶೇ.70ರಷ್ಟು ಜನರು ಪ್ರತಿದಿನ ಚಹಾ ಅಥವಾ ಕಾಫಿಯನ್ನು ಸೇವಿಸುವ ಅಭ್ಯಾಸವನ್ನು ಹೊಂದಿದ್ದಾರೆ. ನೀವು ಅವರಲ್ಲೊಬ್ಬರಾಗಿರಬಹುದು. ನಮ್ಮಲ್ಲಿ ಹೆಚ್ಚಿನವರಿಗೆ ಬೆಳಿಗ್ಗೆ ಎದ್ದ ಬಳಿಕ ಚಹಾ ಅಥವಾ ಕಾಫಿ ಕುಡಿಯಲೇಬೇಕು, ಇಲ್ಲದಿದ್ದರೆ ದಿನವಿಡೀ ಮೂಡ್ ಇರುವುದಿಲ್ಲ. ಇವೆರಡೂ ಪೇಯಗಳು ನಮಗೆ ತಕ್ಷಣಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುವ ಜೊತೆಗೆ ನಮ್ಮನ್ನು ಉಲ್ಲಸಿತಗೊಳಿಸುತ್ತವೆ. ಹೀಗಾಗಿ ಬಹಳಷ್ಟು ಜನರು ಬೆಳಿಗ್ಗೆ ಉಪಹಾರಕ್ಕೆ ಮುನ್ನ ಅಥವಾ ನಂತರ ಚಹಾ ಅಥವಾ ಕಾಫಿ ಸೇವಿಸುತ್ತಾರೆ. ಹೆಚ್ಚಿನವರಿಗೆ ಸಂಜೆ ಆಲಸ್ಯವುಂಟಾದಾಗ ಅಥವಾ ಕೆಲಸದ ದಣಿವನ್ನು ನಿವಾರಿಸಿಕೊಳ್ಳಲು ಇವನ್ನು ಕುಡಿಯಲೇಬೇಕು.
ಚಹಾ ಅಥವಾ ಕಾಫಿ ಸೇವನೆಯ ಒಳಿತು-ಕೆಡಕುಗಳ ಬಗ್ಗೆ ಬಹಳಷ್ಟು ಜನರು ಓದಿರ ಬಹುದು. ನಿಯಮಿತವಾಗಿ ಚಹಾ ಅಥವಾ ಕಾಫಿ ಸೇವನೆಯು ಆರೋಗ್ಯಕ್ಕೆ ಹಾನಿಕರ ಎಂದು ಕೆಲವು ಮೂಲಗಳು ಪ್ರತಿಪಾದಿಸಿದರೆ, ಇದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ ಎಂದು ಇನ್ನು ಕೆಲವು ಮೂಲಗಳು ಹೇಳುತ್ತವೆ.
ಉದಾಹರಣೆಗೆ ಕಾಫಿ ಸೇವನೆ ಆಮ್ಲತೆಗೆ ಕಾರಣವಾಗಬಹುದು, ಆದರೆ ಅದು ನಿಮ್ಮ ನೆನಪಿನ ಶಕ್ತಿಯನ್ನೂ ಹೆಚ್ಚಿಸಬಹುದು. ಕ್ಯಾನ್ಸರ್ ತಡೆಯುವಲ್ಲಿ ಚಹಾ ನೆರವಾಗಬಲ್ಲುದು, ಆದರೆ ಅದು ತಲೆ ಸುತ್ತುವಿಕೆ ಮತ್ತು ಎದೆಯುರಿಗೂ ಕಾರಣವಾಗಬಹುದು. ಹೀಗಾಗಿ ಇವೆರಡು ಸಾಮಾನ್ಯ ಪೇಯಗಳು ಸ್ವಲ್ಪ ಮಟ್ಟಿಗೆ ಆರೋಗ್ಯಕರ, ಆದರೆ ಹೆಚ್ಚಿನ ಪ್ರಮಾಣ ದಲ್ಲಿ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಭಾವಿಸಬಹುದು.
ನೀವು ಬಿಸಿ ಬಿಸಿಯಾದ ಚಹಾ ಅಥವಾ ಕಾಫಿ ಸೇವಿಸುವ ಮುನ್ನ ಎಂದಾದರೂ ನೀರು ಕುಡಿದಿದ್ದೀರಾ ಎನ್ನುವುದನ್ನು ನೆನಪಿಸಿಕೊಳ್ಳಿ. ಹೆಚ್ಚಿನವರ ಉತ್ತರ ‘ಇಲ್ಲ’ ಎಂದೇ ಇರುತ್ತದೆ. ಏಕೆಂದರೆ ಇವುಗಳ ಸೇವನೆಗೆ ಮುನ್ನ ನೀರು ಕುಡಿಯುವುದು ಅಗತ್ಯ ಎಂದು ನಾವು ಭಾವಿಸಿರುವುದೇ ಇಲ್ಲ.
ಆದರೆ ನೂತನ ಸಂಶೋಧನಾ ಅಧ್ಯಯನದಂತೆ ಚಹಾ ಅಥವಾ ಕಾಫಿ ಸೇವನೆಗೆ ಮುನ್ನ ಸ್ವಲ್ಪ ನೀರನ್ನು ಕುಡಿಯಲೇಬೇಕು. ಕಾರಣವಿಲ್ಲಿದೆ.....
ಚಹಾ ಮತ್ತು ಕಾಫಿ ಚಹಾಎಲೆಗಳು ಮತ್ತು ಕಾಫಿ ಬೀಜಗಳಿಂದ ತಯಾರಾಗುತ್ತವೆ. ಇವೆರಡೂ ಪೇಯಗಳು ಕೆಫೀನ್ ಎಂಬ ಸಂಯುಕ್ತವನ್ನು ಒಳಗೊಂಡಿರುತ್ತವೆ ಮತ್ತು ಇದು ಚಹಾಕ್ಕೆ ಹೋಲಿಸಿದರೆ ಕಾಫಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕೆಫೀನ್ ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ, ನಿಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿಸುತ್ತದೆ. ಆದರೆ ಅತಿಯಾದ ಪ್ರಮಾಣದಲ್ಲಿ ಕೆಫೀನ್ ಸೇವನೆ ಉದ್ವೇಗ ಮತ್ತು ಹೃದಯ ಸಮಸ್ಯೆಗಳಂತಹ ದುಷ್ಪರಿಣಾ ಮಗಳಿಗೂ ಕಾರಣವಾಗಬಲ್ಲುದು.
ಚಹಾ ಅಥವಾ ಕಾಫಿ ಸೇವನೆಗೆ ಮುನ್ನ ಒಂದು ಗ್ಲಾಸ್ ನೀರು ಕುಡಿದರೆ ಅದು ಪ್ರಬಲ ಕೆಫೀನ್ನ್ನು ದುರ್ಬಲಗೊಳಿಸುತ್ತದೆ ಮತ್ತು ಹಾನಿಕರ ಪರಿಣಾಮಗಳನ್ನು ಕನಿಷ್ಠ ಗೊಳಿಸುತ್ತದೆ. ಅಲ್ಲದೆ ಕಾಫಿಯು 5 ಪಿಎಚ್ ಮಟ್ಟವನ್ನು ಹೊಂದಿದ್ದರೆ ಚಹಾದಲ್ಲಿ ಅದು 6ರ ಮಟ್ಟದಲ್ಲಿರುತ್ತದೆ. ಯಾವುದೇ ವಸ್ತುವಿನ ಪಿಎಚ್ ವೌಲ್ಯವು ಅದರ ಆಮ್ಲೀಯ ಮಟ್ಟವನ್ನು ಸೂಚಿಸುತ್ತದೆ. ಹೀಗಾಗಿ ಚಹಾ ಮತು ಕಾಫಿ ಇವೆರಡೂ ಆಮ್ಲತೆಗೆ ಕಾರಣವಾಗುತ್ತವೆ. ಅಧಿಕ ಪಿಎಚ್ ಮಟ್ಟವನ್ನು ಹೊಂದಿರುವ ಚಹಾ ಅಥವಾ ಕಾಫಿಯಂತಹ ಪೇಯದ ಸೇವನೆಯು ಹೊಟ್ಟೆಯಲ್ಲಿ ಆಮ್ಲದ ಹಿಮ್ಮುಖ ಹರಿವನ್ನುಂಟು ಮಾಡುತ್ತದೆ ಮತ್ತು ಎದೆಯುರಿ, ಜಠರದ ಭಿತ್ತಿಗಳಿಗೆ ಹಾನಿ, ಗುದನಾಳದ ಕ್ಯಾನ್ಸರ್, ಅಲ್ಸರ್ನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಚಹಾ ಅಥವಾ ಕಾಫಿ ಸೇವನೆಗೆ ಮುನ್ನ ಒಂದು ಗ್ಲಾಸ್ ನೀರು ಕುಡಿದರೆ ಅದು ನಮ್ಮ ಉದರದಲ್ಲಿನ ಆಮ್ಲೀಯ ಚಟುವಟಿಕೆಗಳನ್ನು ಕನಿಷ್ಠಗೊಳಿಸುತ್ತದೆ ಮತ್ತು ನಮಗೆ ಸುರಕ್ಷೆಯನ್ನು ನೀಡುತ್ತದೆ.