ಶೃಂಗೇರಿ ಭಾರತೀತೀರ್ಥ ಸ್ವಾಮೀಜಿ ಮೂಡುಬಿದಿರೆ ಪುರಪ್ರವೇಶ
.jpg)
ಮೂಡುಬಿದಿರೆ, ಜೂ.30: ಶೃಂಗೇರಿ ಶಾರದಾ ಪೀಠಾಧೀಶ ಜಗದ್ಗುರು ಶ್ರೀ ಶ್ರೀ ಭಾರತಿತೀರ್ಥ ಮಹಾ ಸ್ವಾಮೀಜಿ, ಅವರ ಶಿಷ್ಯ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರು ಕೇರಳದಲ್ಲಿ ವಿಜಯಯಾತ್ರೆಯನ್ನು ಮುಗಿಸಿ ಶೃಂಗೇರಿಗೆ ತೆರಳುವ ಸಂದರ್ಭ ಮುಡುಬಿದಿರೆ ಪುರಪ್ರವೇಶ ಮಾಡಿದರು. ಯತಿಧ್ವಯರನ್ನು ಶಾಸ್ತ್ರೋಕ್ತವಾಗಿ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸಿನಲ್ಲಿ ಬರಮಾಡಿಕೊಳ್ಳಲಾಯಿತು.
ಶ್ರೀ ಶ್ರೀ ಭಾರತಿತೀರ್ಥ ಮಹಾಸ್ವಾಮೀಜಿ ಧಾರ್ಮಿಕ ಸಂದೇಶ ನೀಡಿ, 'ಹಣ ಸಂಪಾದನೆಗಿಂತ ಜ್ಞಾನ ಸಂಪಾದನೆಯೇ ಶ್ರೇಷ್ಠ. ಅದುವೇ ಶಾಶ್ವತ ಸಂಪತ್ತು. ವಿದ್ಯೆ ವಿಸ್ತಾರವಾಗಿರುವಂತದ್ದು. ಆಸಕ್ತಿ, ಕಲಿಸುವ ಗುರುವಿನ ಬಗ್ಗೆ ಗೌರವವಿದ್ದರೆ ವಿದ್ಯೆ ಸಿದ್ಧಿಸುತ್ತದೆ. ಡಾ. ಎಂ ಮೋಹನ ಆಳ್ವರವರು ವಿದ್ಯಾಸಂಸ್ಥೆಯನ್ನು ಕಟ್ಟಿ, ಮುನ್ನಡೆಸುವ ರೀತಿ ಎಲ್ಲರು ಮೆಚ್ಚುವಂತದ್ದು' ಎಂದರು.
ಪೌರಸನ್ಮಾನ ಸಮಿತಿಯ ಗೌರವಾಧ್ಯಕ್ಷ ಕೆ. ಅಮರನಾಥ ಶೆಟ್ಟಿ, ಕಾರ್ಯಾಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಕಾರ್ಯದರ್ಶಿ ಶ್ರೀಪತಿ ಭಟ್, ಜತೆಕಾರ್ಯದರ್ಶಿ ನಾರಾಯಣ ಪಿ.ಎಂ., ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಂಪತ್ ಸಾಮ್ರಾಜ್ಯ, ಸುಂದರ ಆಚಾರ್ಯ ಮತ್ತಿತರರು ಸ್ವಾಮೀಜಿಯವರಿಗೆ ಗೌರವಾರ್ಪಣೆ ಸಲ್ಲಿಸಿದರು.
ಆಳ್ವಾಸ್ ವಿದ್ಯಾರ್ಥಿಗಳಿಂದ ಮಹಾವಿಷ್ಣುಸ್ತುತಿ, ವೈಧಿಕರಿಂದ ಚಂದ್ರಮೌಳೀಶ್ವರ ಪೂಜೆ, ಸ್ವಾಮೀಜಿಯವರ ಪಾದಪೂಜೆ ನಡೆಯಿತು. ಕೆ.ವಿ.ರಮಣ್ ಕಾರ್ಯಕ್ರಮ ನಿರ್ವಹಿಸಿದರು.







