ಭಾರತೀಯ ಮೂಲದ ಬಾಲಕ ಐನ್ ಸ್ಟೈನ್, ಸ್ಟೀಫನ್ ಹಾಕಿಂಗ್ ಗಿಂತ ಬುದ್ಧಿವಂತ

ಲಂಡನ್, ಜೂ.30: ಮೆನ್ಸಾ ಐಕ್ಯು ಪರೀಕ್ಷೆಯಲ್ಲಿ 11 ವರ್ಷದ ಭಾರತೀಯ ಮೂಲದ ಬಾಲಕನೊಬ್ಬ 162 ಅಂಕಗಳನ್ನು ಪಡೆದು ಆಲ್ಬರ್ಟ್ ಐನ್ ಸ್ಟೈನ್ ಹಾಗೂ ಸ್ಟೀಫನ್ ಹಾಕಿಂಗ್ ಅವರಿಗಿಂತಲೂ ಮೀರಿದ ಬುದ್ಧಿವಂತಿಕೆ ತನಗಿದೆ ಎಂದು ಸಾಬೀತು ಪಡಿಸಿದ್ದಾನೆ.
ಅರ್ನವ್ ಶರ್ಮ ಎಂಬ ಹೆಸರಿನ ಬಾಲಕ ದಕ್ಷಿಣ ಇಂಗ್ಲೆಂಡಿನ ರೀಡಿಂಗ್ ಪಟ್ಟಣದವನಾಗಿದ್ದು ಈತ ಬಹಳಷ್ಟು ಕಠಿಣ ಪರೀಕ್ಷೆಯಲ್ಲಿ ಯಾವುದೇ ಪೂರ್ವತಯಾರಿಯಿಲ್ಲದೆ ಅತ್ಯುನ್ನತ ಶ್ರೇಣಿ ಪಡೆದಿದ್ದಾನೆ. ಮೆನ್ಸಾ ಟೆಸ್ಟ್ ಬಹಳಷ್ಟು ಕಠಿಣವಾಗಿದ್ದು ಅದರಲ್ಲಿ ಹೆಚ್ಚಿನವರು ತೇರ್ಗಡೆಯಾಗುವುದಿಲ್ಲ ಎಂದು ಹೇಳುವ ಬಾಲಕ ತನ್ನ ಫಲಿತಾಂಶ ತನ್ನ ಕುಟುಂಬಕ್ಕೆ ಬಹಳಷ್ಟು ಅಚ್ಚರಿ ಹಾಗೂ ಸಂತಸ ತಂದಿದೆ ಎಂದಿದ್ದಾನೆ.
ಅರ್ನವ್ ಒಂದೂವರೆ ವರ್ಷದ ಮಗುವಾಗಿರುವಾಗ ಒಮ್ಮೆ ತಾಯಿ ಮೀಶಾ ಧಮೀಜಾ ಶರ್ಮ ಜತೆಗೂಡಿ ಭಾರತಕ್ಕೆ ಹೋಗಿದ್ದ ಸಂದರ್ಭದಲ್ಲಿ ಆತನ ಅಜ್ಜಿ ಆತ ಕಲಿಕೆಯಲ್ಲಿ ಬಹಳಷ್ಟು ಜಾಣನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರು. ಆದರೆ ಅರ್ನವ್ ಗೆ ಎರಡೂವರೆ ವರ್ಷವಾದಾಗಲಷ್ಟೇ ಆತನ ತಾಯಿಗೆ ಗಣಿತ ವಿಷಯದಲ್ಲಿ ಆತನ ನೈಪುಣ್ಯತೆ ಬಗ್ಗೆ ತಿಳಿದಿತ್ತು. ಆತ ಅದಾಗಲೇ 100ಕ್ಕಿಂತಲೂ ಹೆಚ್ಚು ಸಂಖ್ಯೆಗಳನ್ನು ಹೇಳಲು ಕಲಿತಿದ್ದ.
ಕ್ರಾಸ್ ಫೀಲ್ಡ್ಸ್ ಶಾಲೆಯಲ್ಲಿ ಕಲಿಯುತ್ತಿರುವ ಶರ್ಮಗೆ ಗಣಿತದ ಹೊರತಾಗಿ ಹಾಡುವುದು ಮತ್ತು ನೃತ್ಯವೆಂದರೆ ಇಷ್ಟ. ಆತ ವೆಸ್ಟ್ ಮಿನಿಸ್ಟರ್ ಮತ್ತು ಇಟೊನ್ ಕಾಲೇಜಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾನೆ.
ಮೆನ್ಸಾ ವಿಶ್ವದ ಅತ್ಯಂತ ದೊಡ್ಡ ಹಾಗೂ ಹಳೆಯ ಹೈ ಐಕ್ಯು ಸೊಸೈಟಿ ಎಂದು ಪರಿಗಣಿಸಲ್ಪಟ್ಟಿದೆ.







