‘ಬಜರಂಗಿಗಳು ನನ್ನ ಗಂಡನನ್ನು ಕೊಂದರು’
ಗುಂಪುಹಿಂಸೆಗೆ ಬಲಿಯಾದ ಜಾರ್ಖಂಡ್ ನಿವಾಸಿಯ ಪತ್ನಿಯ ಅಳಲು

ರಾಮಗಡ,ಜೂ.30: ಪತಿಯ ಸಾವಿನಿಂದ ಶೋಕತಪ್ತಳಾಗಿರುವ ಮರಿಯಂ ಖಾತೂನ್‌ಗೆ ತನ್ನ ಪತಿಯನ್ನು ಕೊಂದವರಾರು ಎನ್ನುವುದು ಸ್ಪಷ್ಟವಿದೆ. ಅವರೆಲ್ಲ ಬಜರಂಗ ದಳದ ನಂಟು ಹೊಂದಿರುವ ಗೂಂಡಾಗಳಾಗಿದ್ದರು ಎಂದು ಆಕೆ ಆಪಾದಿಸಿದ್ದಾರೆ. ಜಾರ್ಖಂಡ್‌ನ ರಾಮಗಡ ಜಿಲ್ಲೆಯಲ್ಲಿ ಗುರುವಾರ ಗೋಮಾಂಸ ಸಾಗಾಣಿಕೆಯ ಶಂಕೆಯಿಂದ ಖಾತೂನ್‌ರ ಪತಿ ಅಲಿಮುದ್ದೀನ್ ಅಲಿಯಾಸ್ ಅಸ್ಗರ್ ಅನ್ಸಾರಿ(45) ಅವರನ್ನು ಗುಂಪೊಂದು ಥಳಿಸಿ ಕ್ರೂರಹತ್ಯೆಗೈದಿತ್ತು.
ತನ್ನ ಪತಿ ಗೋಮಾಂಸ ವ್ಯಾಪಾರಿಯಾಗಿದ್ದ ಎಂಬ ಪೊಲೀಸರ ಹೇಳಿಕೆಯನ್ನು ನಿರಾಕರಿಸಿದ ಖಾತೂನ್, ಅವರು ಕಲ್ಲಿದ್ದಲು ವ್ಯಾಪಾರದಲ್ಲಿ ತೊಡಗಿಕೊಂಡಿದ್ದರು. ಅವರು ನಮ್ಮ ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿಯಾಗಿದ್ದರು ಎಂದು ಅಳುವಿನ ನಡುವೆಯೇ ತನ್ನ ಮನೆಗೆ ಭೇಟಿ ನೀಡಿದ್ದ ಸುದ್ದಿಗಾರರಿಗೆ ತಿಳಿಸಿದರು.
ಶುಕ್ರವಾರ ಗುಜರಾತ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕಾನೂನನ್ನು ಕೈಗೆತ್ತಿಕೊಳ್ಳದಂತೆ ಗೋರಕ್ಷಕರಿಗೆ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಗುಂಪೊಂದು ಗೋಮಾಂಸ ಸಾಗಾಣಿಕೆ ಆರೋಪದಲ್ಲಿ ಅಲಿಮುದ್ದೀನ್ ಮೇಲೆ ಹಲ್ಲೆ ನಡೆಸಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ಅಲಿಮುದ್ದೀನ್‌ರನ್ನು ಜನರು ಥಳಿಸುತ್ತಿರುವ, ರಸ್ತೆಯ ತುಂಬೆಲ್ಲ ಮಾಂಸದ ತುಂಡುಗಳು ಹರಡಿ ಬಿದ್ದಿರುವ ಮತ್ತು ಅವರ ಮಾರುತಿ ವ್ಯಾನ್ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವ ದೃಶ್ಯಗಳನ್ನು ತೋರಿಸುತ್ತಿವೆ.ರಾಮಗಡದ ಮನುವಾ ಗ್ರಾಮದ ನಿವಾಸಿ ಅಲಿಮುದ್ದೀನ್ ನಾಲ್ಕು ಚೀಲಗಳಲ್ಲಿದ್ದ, ಸುಮಾರು 200 ಕೆ.ಜಿ.ಯಷ್ಟು ಮಾಂಸವನ್ನು ಸಾಗಿಸುತ್ತಿದ್ದರೆನ್ನಲಾಗಿದೆ. ಪೊಲೀಸರು ಗುಂಪಿನ ದಾಳಿಯಿಂದ ಅವರನ್ನು ರಕ್ಷಿಸಿದ್ದರಾದರೂ, ಆಸ್ಪತ್ರೆಗೆ ದಾಖಲಾದ ಕೆಲವೇ ಸಮಯದಲ್ಲಿ ಅವರು ಕೊನೆಯುಸಿರೆಳೆದಿದ್ದರು. ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರು ಸೇರಿದಂತೆ ಆರು ಮಕ್ಕಳಿದ್ದಾರೆ.
ದುಃಖದ ಜೊತೆ ಸಿಟ್ಟಿನಿಂದ ಕುದಿಯುತ್ತಿದ್ದ ಖಾತೂನ್, ತನ್ನ ಪತಿಯ ಹಂತಕರಿಗೆ ಯಾವುದೇ ದಯೆಯನ್ನು ತೋರಿಸಬಾರದು. ಅವರಿಗೂ ತನ್ನ ಪತಿಗಾದಂತೆ ಆಗಬೇಕು. ಅವರು ಜೈಲು ಸೇರಲು ಅರ್ಹರಲ್ಲ, ಅವರನ್ನು ನರಕಕ್ಕೆ ಕಳುಹಿಸುವ ಅಗತ್ಯವಿದೆ ಎಂದು ಕಿಡಿ ಕಾರಿದರು.
ಪೊಲೀಸರು ಬಜರಂಗಿಗಳನ್ನು ಪೋಷಿಸುತ್ತಿದ್ದಾರೆ ಮತ್ತು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ ಅಲಿಮುದ್ದೀನ್‌ರ ಅತ್ತಿಗೆ ಅಬಿದಾ ಖಾತೂನ್, ಅವರು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದರೆ ಪೊಲೀಸರು ಜಾಣಗುರುಡು ಪ್ರದರ್ಶಿಸುತ್ತಿ ದ್ದಾರೆ. ದುಷ್ಕರ್ಮಿಗಳನ್ನು ನಮ್ಮೆದುದು ಹಾಜರುಪಡಿಸಲಿ, ಅವರಿಗೇನು ಶಿಕ್ಷೆ ವಿಧಿಸಬೇಕು ಎಂದು ನಮ್ಮ ಬಡಾವಣೆಯ ಮಹಿಳೆಯರು ನಿರ್ಧರಿಸುತ್ತಾರೆ ಎಂದರು.







