ಆಧಾರ್ ಕಡ್ಡಾಯ ವಿರೋಧಿಸಿ ಪ್ರತಿಭಟನೆ
ಜನರನ್ನು ಅಪರಾಧಿಯಂತೆ ನೋಡುವ ಪರಿಸ್ಥಿತಿ ನಿರ್ಮಾಣ

ಬೆಂಗಳೂರು, ಜೂ.30: ಸರಕಾರದ ಸೇವಾ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಡ್ಡಾಯಗೊಳಿಸಿರುವುದನ್ನು ಖಂಡಿಸಿ ಆಹಾರದ ಹಕ್ಕಿಗಾಗಿ ಆಂದೋಲನ ಸಂಘಟನೆ ಮತ್ತು ಇತರೆ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.
ಶುಕ್ರವಾರ ನಗರದ ಪುರಭವನದ ಬಳಿ ಹಮ್ಮಿಕೊಂಡಿದ್ದ ಪತ್ರಿಭಟನೆಯಲ್ಲಿ ಪಾಲ್ಗೊಂಡಿದ್ದ ಗಾರ್ಮೆಂಟ್ ಮಹಿಳಾ ನೌಕರರ ಸಂಘದ ಸದಸ್ಯೆ ರತ್ನ ಮಾತನಾಡಿ. ನಮ್ಮ ಹುಟ್ಟು ಖಾತ್ರಿಗೊಳಿಸಲು, ಶಿಕ್ಷಣ, ಆರೋಗ್ಯ, ಆಹಾರ, ಪಿಂಚಣಿ ಪಡೆಯಲು ಆಧಾರ್ ಕಡ್ಡಾಯಗೊಳಿಸಿರುವುದು ಸಂವಿಧಾನ ಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಧಾರ್ ಪಡೆಯದೇ ಇರುವ ಮತ್ತು ಜೋಡಣೆಯಾಗದ ನಾಗರಿಕರು ಸರಕಾರಿ ಸೇವೆ ಸೌಲಭ್ಯಗಳಿಂದ ವಂಚಿತರಾಗುತ್ತಿದಾರೆ. ಆರ್ಥಿಕವಾಗಿ ಹಿಂದುಳಿದವರು ಪಡಿತರ, ಪಿಂಚಣಿ ಸೇರಿದಂತೆ ಇತರೆ ಮೂಲ ಸವಲತ್ತುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕೂಡಲೆ ಆಧಾರ್ ಸಂಖ್ಯೆ ಕಡ್ಡಾಯಗೊಳಿಸಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ನಮ್ಮ ಹುಟ್ಟು ನಾಗರಿಕತ್ವವನ್ನು ಖಾತ್ರಿಗೊಳಿಸುತ್ತದೆಯೇ ಹೊರತು ಯಾವುದೇ ಗುರುತಿನ ಚೀಟಿಯಿಂದಲ್ಲ. ಆದರೆ ಸಂವಿಧಾನದ ಆಶೋತ್ತರಗಳನ್ನು ಗಾಳಿಗೆ ತೂರಿ ಮೂಲಭೂತ ಹಕ್ಕುಗಳನ್ನು ನಿರಾಕರಿಸಲು ಸರಕಾರ ಆಧಾರ್‌ಕಾರ್ಡ್ ಅನ್ನು ಕಡ್ಡಾಯಗೊಳಿಸಿದೆ ಎಂದು ಕಿಡಿಕಾರಿದರು.
ವ್ಯಕ್ತಿಯ ಅಸ್ತಿತ್ವವನ್ನು ದೃಢೀಕರಿಸಲು ದೇಹದ ಅಂಗಾಂಗಗಳನ್ನು ಪುರಾವೆಯಾಗಿ ನೀಡುವಂತಹ ಹೀನಾಯ ಸ್ಥಿತಿಗೆ ಸರಕಾರ ನಮ್ಮನ್ನು ದೂಡಿದೆ. ದೇಶದ ನಾಗರಿಕರಾದ ಮುಗ್ಧ ಜನರನ್ನು ಅಪರಾಧಿಯಂತೆ, ಭ್ರಷ್ಟರು ಎಂಬ ಗುಮಾನಿಯಿಂದ ನೋಡುವ ಪರಿಸ್ಥಿತಿ ಉದ್ಭವಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಆದೇಶಕ್ಕೆ ಗೌರವ ನೀಡಿ ಆಧಾರ್ ಚೀಟಿ ಕಡ್ಡಾಯಗೊಳಿಸಿರುವುದನ್ನು ಕೂಡಲೆ ಕೈ ಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಕೀಲ ನರಸಿಂಹಮೂರ್ತಿ ಸೇರಿದಂತೆ ಇತರರು ಇದ್ದರು.







