ಜಿಎಸ್‌ಟಿ ಆಗಮನದೊಂದಿಗೆ ತನಿಖಾ ಠಾಣೆಗಳು ಮಾಯ

ಹೊಸದಿಲ್ಲಿ,ಜೂ.30: ‘ಒಂದು ರಾಷ್ಟ್ರ ಒಂದು ತೆರಿಗೆ’ ಪರಿಕಲ್ಪನೆಯೊಂದಿಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವ್ಯವಸ್ಥೆ ಶುಕ್ರವಾರ ಮಧ್ಯರಾತ್ರಿಯಿಂದ ಅಸ್ತಿತ್ವಕ್ಕೆ ಬರಲಿದ್ದು, ಇದರೊಂದಿಗೆ ಗಂಟೆಗಟ್ಟಲೆ ಕಾಲ ವಾಹನಗಳ ಸಂಚಾರಕ್ಕೆ ವ್ಯತ್ಯಯವನ್ನುಂಟು ಮಾಡಿ ಸರಕುಗಳ ರವಾನೆಯನ್ನು ವಿಳಂಬಿಸುತ್ತಿದ್ದ ಗಡಿಗಳಲ್ಲಿನ ತನಿಖಾ ಠಾಣೆಗಳು ಶನಿವಾರದಿಂದ ಅಸ್ತಿತ್ವ ಕಳೆದುಕೊಳ್ಳಲಿವೆ.
ಹಲವಾರು ರಾಜ್ಯಗಳು ಸ್ವಯಂಪ್ರೇರಿತವಾಗಿ ತನಿಖಾ ಠಾಣೆಗಳನ್ನು ತೆಗೆದು ಹಾಕುತ್ತಿ ದ್ದರೆ ಇನ್ನಷ್ಟು ರಾಜ್ಯಗಳು ಶನಿವಾರ ಈ ವಾಣಿಜ್ಯ ತೆರಿಗೆ ತನಿಖಾ ಠಾಣೆಗಳಿಗೆ ವಿದಾಯ ಹೇಳುವ ನಿರೀಕ್ಷೆಯಿದೆ.
ತನಿಖಾ ಠಾಣೆಗಳನ್ನು ತೆಗೆದುಹಾಕಲು ಕರ್ನಾಟಕ, ಬಿಹಾರ, ಮಧ್ಯಪ್ರದೇಶ ಸರಕಾರಗಳು ಈಗಾಗಲೇ ನಿರ್ಧರಿಸಿವೆ.
ಗಮನ ಸೆಳೆದಿರುವುದೆಂದರೆ ಗುಜರಾತ್, ಮಹಾರಾಷ್ಟ್ರ, ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಛತ್ತೀಸ್‌ಗಡ, ಪಶ್ಚಿಮ ಬಂಗಾಳ, ಒಡಿಶಾ ಇತ್ಯಾದಿ ರಾಜ್ಯಗಳು ವಾಣಿಜ್ಯ ತೆರಿಗೆ ತನಿಖಾ ಠಾಣೆಗಳನ್ನು ಹಿಂದೆಯೇ ಕೈಬಿಟ್ಟಿದ್ದವು. 2008,ಆಗಸ್ಟ್‌ನಲ್ಲಿಯೇ ತನ್ನೆಲ್ಲ ತನಿಖಾ ಠಾಣೆಗಳನ್ನು ತೆಗೆದುಹಾಕಿದ್ದ ಉತ್ತರ ಪ್ರದೇಶವು ಇಂತಹ ಕ್ರಮ ಕೈಗೊಂಡ ಮೊದಲ ರಾಜ್ಯವೆನಿಸಿಕೊಂಡಿತ್ತು. ಮೂರು ವರ್ಷಗಳ ಬಳಿಕ ಪ.ಬಂಗಾಳ ಇದೇ ದಾರಿಯಲ್ಲಿ ಹೆಜ್ಜೆಯಿಟ್ಟಿದ್ದರೆ, ಗುಜರಾತ್ ಎರಡು ವರ್ಷಗಳ ಹಿಂದೆ ತನಿಖಾ ಠಾಣೆಗಳಿಗೆ ವಿದಾಯ ಹೇಳಿತ್ತು.
ಆದರೆ ಇದರಿಂದ ಲಾರಿ ಚಾಲಕರ ಪಯಣ ಸುಖಕರವಾಗುವುದು ಅನುಮಾನ. ತನಿಖಾ ಠಾಣೆಗಳೇ ಇರುವುದಿಲ್ಲ ಎಂದು ಅರ್ಥವಲ್ಲ. ಜಿಎಸ್‌ಟಿ ಜಾರಿಗನುಗುಣವಾಗಿ ವಾಣಿಜ್ಯ ತೆರಿಗೆ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸುವುದು ನಿಲ್ಲುತ್ತದೆ,ಅಷ್ಟೇ ಎಂದು ಬಿಹಾರದ ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.
ಕರ್ನಾಟಕದಲ್ಲಿ ಭೌತಿಕ ದೃಢೀಕರಣ ಕೇಂದ್ರಗಳು ಲಾರಿಗಳನ್ನು ನಿಲ್ಲಿಸಿ ಸರಕುಗಳನ್ನು ಜಿಎಸ್‌ಟಿಎನ್ ವೆಬ್ ಪೋರ್ಟಲ್‌ಗೆ ಅನುಗುಣವಾಗಿ ಘೋಷಿಸಲಾಗಿದೆಯೇ ಎನ್ನುವುದನ್ನು ಪರಿಶೀಲಿಸಲಿವೆ.ತನಿಖಾಠಾಣೆಗಳೂ ಇದೆ ಕೆಲಸ ಮಾಡುತ್ತಿದ್ದವು. ಇಲೆಕ್ಟ್ರಾನಿಕ್ ವೇ ಬಿಲ್‌ಗಳ ವ್ಯವಸ್ಥೆಯಾಗುವವೆಗೂ ಇದೇ ಪದ್ಧತಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







