ಜಿಎಸ್‌ಟಿಯಿಂದ ಆರ್ಥಿಕ ಪ್ರಗತಿ ಎಂಬುದು ಅಸಂಬದ್ಧ: ನೀತಿ ಆಯೋಗದ ಸದಸ್ಯ ಬಿಬೇಕ್

ಹೊಸದಿಲ್ಲಿ, ಜೂ. 28: ಜಿಎಸ್‌ಟಿ ದೇಶದ ಆರ್ಥಿಕತೆ ಬೆಳವಣಿಗೆಯನ್ನು ಶೇ. 1.5 ಅಂಶದಷ್ಟು ವರ್ಧಿಸಲಿದೆ ಎಂಬ ಪ್ರತಿಪಾದನೆ ಅಸಂಬದ್ಧ ಎಂದು ನೀತಿ ಆಯೋಗದ ಸದಸ್ಯ ಹಾಗೂ ಆರ್ಥಿಕ ತಜ್ಞ ವಿವೇಕ್ ದೇಬ್ರಾಯ್ ಹೇಳಿದ್ದಾರೆ.
ತೆರಿಗೆ ಸುಧಾರಣೆ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆಯನ್ನು ಶೇ. 1-2ರಷ್ಟು ಹೆಚ್ಚಿಸಲು ನೆರವಾಗಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಅರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೀತಿ ಆಯೋಗದ ಅಧ್ಯಕ್ಷರಾಗಿರುವ ಪ್ರಧಾನಿ ನರೇಂದ್ರ ಮೋದಿ, ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಈ ನೀತಿ ಅಳವಡಿಸಲು ಸಲಹೆ ಮಾಡಿದ್ದರು. 13ನೇ ಹಣಕಾಸು ಆಯೋಗದ ಮೌಲ್ಯಮಾಪನ ಆಧಾರಿತ ಊಹೆಗಳು ಈ ಜಿಎಸ್‌ಟಿಯನ್ನು ಕಾರ್ಯರೂಪಕ್ಕೆ ತರಲು ಚಿಂತಿಸುವಂತೆ ಮಾಡಿದೆ ಎಂದು ಅವರು ಹೇಳಿದರು.
ರಾಜಧಾನಿಯಲ್ಲಿ ಮಾಧ್ಯಮ ಗುಂಪು ಪ್ರಾಯೋಜಿಸಿದ ಜಿಎಸ್‌ಟಿ ಕಾರ್ಯಕ್ರಮದಲ್ಲಿ ಮಾತನಾಡಿದ ದೇಬ್ರಾಯ್, ಪೆಟ್ರೋಲಿಯಂ, ಎಲೆಕ್ಟ್ರಿಸಿಟಿ, ಆಲ್ಕೋಹಾಲ್ ಹಾಗೂ ಇತರ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸಿರುವುದರಿಂದ ಯೋಜಿತ ಪ್ರಮಾಣದಂತೆ ಜಿಡಿಪಿ ಗಳಿಕೆಯಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಸೂಕ್ತ ತಯಾರಿ ಇಲ್ಲದೆ ಜಿಎಸ್‌ಟಿಯನ್ನು ಜಾರಿಗೊಳಿಸಿರುವ ಕೇಂದ್ರ ಸರಕಾರವನ್ನು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಇದು ಸಮರ್ಪಕ ಜಿಎಸ್‌ಟಿ ಅಲ್ಲ. ಆದರೆ, ಸಮರ್ಪಕ ಜಿಎಸ್‌ಟಿಗಾಗಿ ಇನ್ನೂ 17 ವರ್ಷ ಕಾಯಬೇಕು ಎಂದು ಅವರು ಹೇಳಿದ್ದಾರೆ.







