ಲಾರಿ ಢಿಕ್ಕಿ ತಾಯಿ ಸಾವು, ಮಗ ಪಾರು
ಬೆಂಗಳೂರು, ಜೂ.30: ಹಿಂಬದಿಯಿಂದ ಶರವೇಗವಾಗಿ ಬಂದ ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿರುವ ದುರ್ಘಟನೆ ಇಲ್ಲಿನ ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಕ್ಷ್ಮೀದೇವಿನಗರದ ಮಣಿಮಾಲಾ(45) ಮೃತಪಟ್ಟಿದ್ದು, ಅವರ ಪುತ್ರ ಸತ್ಯ(18) ಘಟನೆಯಲ್ಲಿ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ ಮಣಿಮಾಲಾ ಅವರು ಗುರುವಾರ ಮಧ್ಯಾಹ್ನ 2:40ರ ಸುಮಾರಿಗೆ ಬೈಕ್‌ನಲ್ಲಿ ತನ್ನ ಮಗನೊಂದಿಗೆ ರಾಜಾಜಿನಗರದ ಕೃಷ್ಣಾನಂದ ಜಂಕ್ಷನ್ ಕಡೆಯಿಂದ ಕಂಠೀರವ ಸ್ಟುಡಿಯೋ ಕಡೆಗೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬಂದ ಲಾರಿ ಬೈಕ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಢಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಿಂದ ಕೆಳಕ್ಕೆ ಜಾರಿ ಬಿದ್ದ ಮಣಿಮಾಲಾ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ರಾಜಾಜಿನಗರ ಸಂಚಾರ ಠಾಣೆ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.





