ತುಂಬೆ: ಯುವತಿಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದವನಿಗೆ ಥಳಿತ

ಬಂಟ್ವಾಳ, ಜೂ. 30: ಯುವತಿಯೋರ್ವಳ ಮೊಬೈಲ್ ಫೋನ್‍ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಒಡಿಶಾ ಮೂಲದ ಯುವಕನೋರ್ವನಿಗೆ ಯುವತಿಯ ಸಂಬಂಧಿಕರು ಹಾಗೂ ಸಾರ್ವಜನಿಕರು ಗೂಸಾ ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ತುಂಬೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ತುಂಬೆಯ ನಿವಾಸಿ ಮುಸ್ಲಿಮ್ ಯುವತಿಯೊಬ್ಬಳು ಕಳೆದ ನಾಲ್ಕು ದಿನದ ಹಿಂದೆ ಸ್ಥಳೀಯ ಮೊಬೈಲ್ ಶಾಪ್‍ವೊಂದರಲ್ಲಿ ಮೊಬೈಲ್ ರೀಚಾರ್ಜ್ ಮಾಡಿಸಿಕೊಂಡಿದ್ದಳು. ಈ ವೇಳೆ ಅಲ್ಲಿದ್ದ ಒಡಿಶಾ ಮೂಲದ ನಾರಾಯಣ ಊಹಾನ್ ಎಂಬಾತ ಈಕೆಯ ನಂಬರ್ ಅನ್ನು ಬರೆದುಕೊಂಡಿದ್ದು, ಆ ಬಳಿಕದಿಂದ ಆತ ತನ್ನನ್ನು ಝುಬೈರ್ ಎಂದು ಪರಿಚಯಿಸಿಕೊಂಡು ಆಕೆಗೆ ಕರೆ ಮಾಡಿದ್ದ ಎನ್ನಲಾಗಿದೆ. "ಕರೆ ಮಾಡಬೇಡ" ಎಂದು ಯುವತಿ ಹೇಳಿದರೂ ಪದೇ ಪದೇ ಮಾನಸಿಕವಾಗಿ ಕಿರುಕುಳ ನೀಡಿದ್ದನ್ನು ಯುವತಿ ತನ್ನ ತಂದೆಯ ಬಳಿ ತಿಳಿಸಿದ್ದು, ಅವರ ಸೂಚನೆಯಂತೆ ಯುವತಿ ಯುವಕನನ್ನು ತುಂಬೆಗೆ ಬರಲು ತಿಳಿಸಿದ್ದಳು.
ಅದರಂತೆ ತುಂಬೆಗೆ ಬಂದ ನಾರಾಯಣ ಊಹಾನ್‍ನನ್ನು ವಿಚಾರಿಸಿ ಆತನಿಗೆ ಧರ್ಮದೇಟು ನೀಡಿದ ಯುವತಿಯ ಸಂಬಂಧಿಕರು ಮತ್ತು ಸಾರ್ವಜನಿಕರು ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೆ ಆತ ಬಂದಿರುವ ಕಾರಿನ ಹಿಂಬದಿಯ ಗಾಜಿಗೆ ಹಾನಿ ಮಾಡಲಾಗಿದೆ. ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದ್ದು ತಾನು ಒಡಿಶಾ ಮೂಲದವನಾಗಿದ್ದು, ಎಲ್‍ಇಡಿ ಲೈಟ್ ಸಹಿತ ಎಲೆಕ್ಟ್ರಾನಿಕ್ ವಸ್ತುಗಳನ್ನು ವ್ಯಾಪಾರ ಮಾಡುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಘಟನೆಯು ತುಂಬೆ ರಾಷ್ಟ್ರೀಯ ಹೆದ್ದಾರಿ ಸಮೀಪವೇ ನಡೆದುದ್ದರಿಂದ ಭಾರೀ ಜನರು ಸೇರಿ ಕೆಲಕಾಲ ಸಂಚಾರಕ್ಕೆ ತೊಡಕಾಗಿತ್ತು. ಇಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಜನರನ್ನು ಚದುರಿಸಿದರು.







