ನಾಡಪ್ರಭು ಕೆಂಪೇಗೌಡರ ಹಾದಿಯಲ್ಲಿ ಸಾಗೋಣ
ಬೆಂಗಳೂರು, ಜೂ.30: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ತತ್ವಾದರ್ಶಗಳು ಅನುಕರಣೀಯವಾಗಿದ್ದು, ಪ್ರತಿಯೊಬ್ಬರು ಅವರ ಹಾದಿಯಲ್ಲಿ ಸಾಗೋಣವೆಂದು ವಸತಿ ಸಚಿವ ಎಂ.ಕೃಷ್ಣಪ್ಪ ತಿಳಿಸಿದರು.
ಶುಕ್ರವಾರ ಕರ್ನಾಟಕ ವಿದ್ಯುತ್ ಕಾರ್ಖಾನೆಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಡೋಲು ಬಾರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ಜನತೆ ಸ್ವಾಭಿಮಾನದಿಂದ ಬದುಕಲು ಯೋಗ್ಯವಾದ ರೀತಿಯಲ್ಲಿ ನಗರ ನಿರ್ಮಿಸಿದ ಕೆಂಪೇಗೌಡರ ದೂರದೃಷ್ಟಿತ್ವ ಮಾದರಿಯಾಗಲಿ ಎಂದು ಆಶಿಸಿದರು.
ಕರ್ನಾಟಕ ವಿದ್ಯುತ್ ಕಾರ್ಖಾನೆಯ ಅಧ್ಯಕ್ಷ ಎಸ್.ಮನೋಹರ್ ಮಾತನಾಡಿ, ಎಲ್ಲ ವರ್ಗಗಳ ಹಿತಚಿಂತಕರು, ಜಾತ್ಯತೀತ ಮನೋಭಾವವುಳ್ಳವರಾಗಿದ್ದ ನಾಡಪ್ರಭು ಕೆಂಪೇಗೌಡರು ಸುಂದರ ಬೆಂಗಳೂರನ್ನು ನಿರ್ಮಾಣ ಮಾಡಿದ್ದರು. ಅದೇ ಬೆಂಗಳೂರು ಈಗ ಮತ್ತಷ್ಟು ವಿಸ್ತರಿಸಿ ವಿಶ್ವಖ್ಯಾತಿ ಪಡೆದಿದೆ ಎಂದು ಅಭಿಮಾನಪಟ್ಟರು.
ಕಾರ್ಯಕ್ರಮದಲ್ಲಿ ಕವಿಕಾದ ವ್ಯವಸ್ಥಾಪಕ ನಿರ್ದೇಶಕ ಎಸ್.ವಿ.ಗೋವಿಂದರಾಜು, ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಕೆ.ರಾಮಚಂದ್ರನ್, ಮುಖಂಡರಾದ ಜಿ.ಜನಾರ್ದನ್, ಶೇಖರ್, ಸುಧಾಕರ್ ಮತ್ತಿತರರಿದ್ದರು.







