ಜಿಎಸ್ ಟಿ ಗೆ ವ್ಯಾಪಕ ವಿರೋಧ
ಕೇಂದ್ರ ಸರಕಾರದ ವಿರುದ್ಧ ಅಂಗಡಿ ಮಾಲಕರ ಆಕ್ರೋಶ

ಬೆಂಗಳೂರು, ಜೂ.30: ಕೇಂದ್ರ ಸರಕಾರ ಇಂದು ಮಧ್ಯರಾತ್ರಿಯಿಂದ ಜಾರಿ ಮಾಡಲು ಉದ್ದೇಶಿಸಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ನಗರದ ಅವಿನ್ಯೂ ರಸ್ತೆ, ಚಿಕ್ಕಪೇಟೆ, ಬಳೇಪೇಟೆ ರಸ್ತೆ ಸೇರಿದಂತೆ ವಿವಿಧ ಭಾಗಗಳ ವರ್ತಕರು ಅಂಗಡಿಗಳನ್ನು ಬಂದ್ ಪ್ರತಿಭಟನೆ ನಡೆಸಿದರು.
ಶುಕ್ರವಾರ ಮಧ್ಯಾಹ್ನದ ವೇಳೆಗೆ ವರ್ತಕರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಜಿಎಸ್ಟಿ ವಿರೋಧಿಸಿ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು. ಕೇಂದ್ರ ಸರಕಾರ ಜಿಎಸ್ಟಿ ಜಾರಿ ಮಾಡುವ ಮೂಲಕ ಬಡವರ ಹಾಗೂ ಮಾಧ್ಯಮ ವರ್ಗದವರು ಮತ್ತಷ್ಟು ಸಮಸ್ಯೆಗೆ ಈಡಾಗುವಂತೆ ಮಾಡುತ್ತಿದೆ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮಲ್ಲಿರುವ ಬಹುತೇಕ ವ್ಯಾಪಾರಸ್ಥರು ಅಶಿಕ್ಷಿತರಾಗಿದ್ದು, ತಮಗೆ ತಿಳಿದ ರೀತಿಯಲ್ಲಿ ವ್ಯಾಪಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ, ಜಿಎಸ್ಟಿ ಜಾರಿಯಾದ ನಂತರ ಸಂಪೂರ್ಣ ವ್ಯವಹಾರ ಆನ್‌ಲೈನ್ ಮೂಲಕವೇ ಆಗಬೇಕು. ಪ್ಯಾನ್ ಆಧಾರ್‌ಗೆ ಲಿಂಕ್ ಮಾಡಬೇಕು. ತೆರಿಗೆ ಇಲಾಖೆಯ ವ್ಯಾಪ್ತಿಗೊಳಪಡಬೇಕು. ಇದರಿಂದ ಮಧ್ಯಮ ವರ್ಗದ ವ್ಯಾಪಾರಸ್ಥರಿಗೆ ತೀರ ಸಮಸ್ಯೆಯಾಗಲಿದೆ ಎಂದು ಅಂಗಡಿ ಮಾಲಕರು ತಮ್ಮ ಆತಂಕವನ್ನು ವ್ಯಕ್ತಪಡಿಸಿದರು.
ಬಡವ ಹಾಗೂ ಮಧ್ಯಮ ವರ್ಗದವರೇ ಹೆಚ್ಚಿರುವ ನಮ್ಮ ದೇಶಕ್ಕೆ ಜಿಎಸ್ಟಿ ಅಗತ್ಯವಿಲ್ಲ. ಶೇ.1ರಷ್ಟು ಆಧುನಿಕವಾಗಿ ಮುಂದುವರೆದಿರುವ ಉದ್ಯಮಿಗಳು ಹಾಗೂ ಜನತೆಗಾಗಿ ಜಿಎಸ್ಟಿ ಜಾರಿ ಮಾಡುವ ಮೂಲಕ ಜನಸಾಮಾನ್ಯರನ್ನು ಸಮಸ್ಯೆಗೆ ಈಡಾಗುವಂತೆ ಮಾಡಲಾಗುತ್ತಿದೆ ಎಂದು ವರ್ತಕ ಮಹೇಶ್ ಆತಂಕ ವ್ಯಕ್ತಪಡಿಸಿದರು.
ಈಗಾಗಲೆ ದೇಶದಲ್ಲಿ ಉದ್ಯಮ ನಡೆಸಲು ವಿದೇಶ ಕಂಪೆನಿಗಳಿಗೆ ಮುಕ್ತ ಆಹ್ವಾನ ನೀಡಿರುವ ಕೇಂದ್ರ ಸರಕಾರ, ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಯ್ದೆ ಕಾನೂನುಗಳನ್ನು ರೂಪಿಸಲು ಹೊರಟಿದ್ದಾರೆ. ಇದರ ಪರಿಣಾಮವಾಗಿ ಮಧ್ಯಮ ವರ್ಗದ ವರ್ತಕರು ಹಾಗೂ ಬಡವರು ನಿರಂತರವಾಗಿ ಸಂಕಷ್ಟವನ್ನು ಅನುಭವಿಸುವಂತಾಗಿದೆ ಎಂದು ಅವರು ದೂರಿದರು.







