ಸೌದಿ: ಕ್ಷಮಾದಾನ ಅವಧಿ 30 ದಿನ ವಿಸ್ತರಣೆ

ರಿಯಾದ್, ಜೂ. 30: ಸೌದಿ ಅರೇಬಿಯದಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರು ದಂಡವಿಲ್ಲದೆ ದೇಶ ತೊರೆಯಲು ಅವಕಾಶ ನೀಡುವ ಕ್ಷಮಾದಾನ ಯೋಜನೆಯನ್ನು ಇನ್ನೂ 30 ದಿನ ವಿಸ್ತರಿಸಲಾಗಿದೆ ಎಂದು ಸೌದಿ ಅರೇಬಿಯದ ಸರಕಾರಿ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ ಹೇಳಿದೆ.
ವಿಸ್ತರಣೆಯು ಜೂನ್ 25ರಿಂದ ಜಾರಿಗೆ ಬಂದಿದೆ.
‘ಉಲ್ಲಂಘನೆಯಿಲ್ಲದ ದೇಶ’ ಅಭಿಯಾನದಡಿ ನೀಡಲಾಗಿರುವ ಕ್ಷಮಾದಾನ ಅವಧಿಯನ್ನು ಎಲ್ಲ ದೇಶಗಳ ಜನರಿಗಾಗಿ ಕಳೆದ ರವಿವಾರದಿಂದ ಜಾರಿಗೆ ಬರುವಂತೆ ವಿಸ್ತರಿಸಲಾಗಿದೆ ಎಂದು ಪಾಸ್‌ಪೋರ್ಟ್ ಮಹಾನಿರ್ದೇಶನಾಲಯ ತಿಳಿಸಿದೆ.
ಈ ಯೋಜನೆಯ ಆರಂಭಿಕ ಕ್ಷಮಾದಾನ ಅವಧಿ ಮಾರ್ಚ್ 29ರಿಂದ ಆರಂಭಿಸಿ 90 ದಿನಗಳಾಗಿತ್ತು. ಸೌದಿ ಅರೇಬಿಯದ ವಾಸ್ತವ್ಯ ನಿಯಮಗಳನ್ನು ಉಲ್ಲಂಘಿಸಿರುವ ವಿದೇಶಿ ಕೆಲಸಗಾರರು ದಂಡ ಪಾವತಿಸದೆ ಹಾಗೂ ದೇಶಕ್ಕೆ ವಾಪಸ್ ಬರುವ ಅವಕಾಶವನ್ನು ಕಳೆದುಕೊಳ್ಳದೆ ದೇಶ ತೊರೆಯಲು ಈ ಯೋಜನೆಯು ಅವಕಾಶ ನೀಡಿತ್ತು.
ಆಂತರಿಕ ಸಚಿವ ರಾಜಕುಮಾರ ಅಬ್ದುಲ್ ಅಝೀಝ್ ಬಿನ್ ಸೌದ್ ಬಿನ್ ನಯೀಫ್‌ರ ಸೂಚನೆಗಳಂತೆ, ಕ್ಷಮಾದಾನ ಯೋಜನೆಯನ್ನು 30 ದಿನಗಳ ಕಾಲ ವಿಸ್ತರಿಸಲಾಗುತ್ತಿದೆ ಎಂದು ಪಾಸ್‌ಪೋರ್ಟ್ಸ್‌ನ ಮಹಾ ನಿರ್ದೇಶಕ ಮೇಜರ್ ಜನರಲ್ ಸುಲೈಮಾನ್ ಬಿನ್ ಅಬ್ದುಲ್ ಅಝೀಝ್ ಅಲ್-ಯಾಹ್ಯ ಹೇಳಿದ್ದಾರೆ ಎಂದು ಸೌದಿ ಪ್ರೆಸ್ ಏಜನ್ಸಿ ತಿಳಿಸಿದೆ.
ಹಿಂದಿನ ಕ್ಷಮಾದಾನ ಅವಧಿಯ ಪ್ರಯೋಜನ ಪಡೆಯಲು ಸಾಧ್ಯವಾಗದ ಅಕ್ರಮ ವಾಸಿ ವಿದೇಶೀಯರು ಹಾಗೂ ಹಿಂದಿನ ಅವಧಿಯಲ್ಲಿ ನಿರ್ಗಮನ ವಿಧಿವಿಧಾನಗಳನ್ನು ಪೂರೈಸಿದ, ಆದರೆ ನಿರ್ಗಮಿಸಲು ಸಾಧ್ಯವಾಗದವರು ಅಗತ್ಯ ವಿಧಿವಿಧಾನಗಳನ್ನು ಪೂರೈಸುವುದಕ್ಕಾಗಿ ಯಾವುದಾದರೂ ‘ಸ್ವಾಗತ ಕೇಂದ್ರ’ಗಳಿಗೆ ತಕ್ಷಣ ಭೇಟಿ ನೀಡುವಂತೆ ಅಲ್-ಯಾಹ್ಯ ಒತ್ತಾಯಿಸಿದ್ದಾರೆ.







