ಬೆಳಗಾವಿಯಿಂದ ಕಾಂಗ್ರೆಸ್ ವಿಜಯಯಾತ್ರೆ ಆರಂಭ: ಮುಖ್ಯಮಂತ್ರಿ

ಬೆಳಗಾವಿ, ಜೂ.30: ಕಾಂಗ್ರೆಸ್ ಪಕ್ಷದ ವಿಜಯ ಯಾತ್ರೆಯು ಬೆಳಗಾವಿ ಜಿಲ್ಲೆಯಿಂದಲೇ ಆರಂಭವಾಗಬೇಕು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮೂಲಕ 2019ರಲ್ಲಿ ರಾಹುಲ್‌ಗಾಂಧಿಯನ್ನು ದೇಶದ ಪ್ರಧಾನಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಶುಕ್ರವಾರ ನಗರದ ಅಥಣಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರ ವಿಶ್ವಾಸ, ಅಭಿಮಾನವನ್ನು ಉಳಿಸಿಕೊಳ್ಳುವ ಕೆಲಸವನ್ನು ನಮ್ಮ ಸರಕಾರ ಮಾಡಿದೆ. ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಬೆಳಗಾವಿ ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿದ್ದು, ಕಳೆದ ಬಾರಿ 6 ಸ್ಥಾನಗಳನ್ನು ಮಾತ್ರ ಗೆದ್ದಿದ್ದೇವೆ. ಜಿಲ್ಲೆಯ ಎಲ್ಲ ನಾಯಕರು ಒಗ್ಗಟ್ಟಾಗಿ ಶ್ರಮಿಸಿದರೆ 12 ರಿಂದ 15 ಸ್ಥಾನ ಗೆಲ್ಲಲು ಸಾಧ್ಯವಿದೆ ಎಂದು ಸಿದ್ದರಾಮಯ್ಯ ಹೇಳಿದರು.
ನಮ್ಮ ಸರಕಾರದ ಆಡಳಿತಾವಧಿಯಲ್ಲಿ ಯಾವುದೇ ಭೇದ ಭಾವವಿಲ್ಲ. ಆದರೆ, ಬಿಜೆಪಿ ಧರ್ಮ, ಜಾತಿ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ನಾವು ಎಲ್ಲ ವರ್ಗದವರನ್ನು ಸಮಾನವಾಗಿ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಎಂದು ಹೇಳಿಕೆ ನೀಡುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಜೈಲಿಗೆ ಹೋಗಿದ್ದು ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಸಚಿವ ಸ್ಥಾನವನ್ನು ಯಾವ ಕಾರಣಕ್ಕೆ ಕಳೆದುಕೊಂಡರು ಎಂಬುದನ್ನು ಬಹಿರಂಗಪಡಿಸಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿ ಕೂತು ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ್ದಾರೆ. ಅಶ್ಲೀಲ ಚಿತ್ರಗಳನ್ನು ನೋಡುವವರು ಸಾರ್ವಜನಿಕ ಜೀವನದಿಂದ ದೂರ ಹೋಗಬೇಕು. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಡಿಯೂರಪ್ಪ, ಗಣಿಗಾರಿಕೆಯಿಂದ ಬಂದ ಹಣವನ್ನು ಪಡೆದವರು ಯಾರು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಅವರು ಆಗ್ರಹಿಸಿದರು.
ಭ್ರಷ್ಟಾಚಾರದ ಹಣವನ್ನು ಯಾರಾದರೂ ಚೆಕ್ ಮೂಲಕ ಪಡೆಯುತ್ತಾರೆಯೇ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲು ನಾವು ಬಿಡುವುದಿಲ್ಲ. ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ರಾಜ್ಯದ ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ಯಡಿಯೂರಪ್ಪ ಹೇಳುತ್ತಿದ್ದರು. ಆದರೆ, ನಾವು ಕೆಲಸ ಮಾಡಿದ್ದಕ್ಕೆ ಕೂಲಿ ನೀಡಿ ಎಂದು ಕೇಳಿದೆವು. ಅದರಂತೆ, ಜನರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
‘ಮಿಷನ್ 150’ ಎನ್ನುತ್ತಿದ್ದ ಯಡಿಯೂರಪ್ಪ ಬಾಯಿ ಬಂದ್ ಆಗಿದೆ. ಪ್ರಧಾನಿ ನರೇಂದ್ರಮೋದಿ ಆರು ಕೋಟಿ ಉದ್ಯೋಗಗಳನ್ನು ಸೃಷ್ಟಿಸಬೇಕಿತ್ತು. ಆದರೆ, ಕೇವಲ ನಾಲ್ಕು ಲಕ್ಷ ಉದ್ಯೋಗಳನ್ನು ಮಾತ್ರ ಸೃಷ್ಟಿಸಿದ್ದಾರೆ. ಯುಪಿಎ ಸರಕಾರದ ಯೋಜನೆಗಳ ಹೆಸರು ಬದಲಾಯಿಸಿಕೊಂಡು ಮೋದಿ ಸರಕಾರ ಕೆಲಸ ಮಾಡಿದೆ. ಆಧಾರ್, ಜಿಎಸ್‌ಟಿ ಕಾರ್ಯಕ್ರಮಗಳು ಯುಪಿಎ ಸರಕಾರದ ಯೋಜನೆಗಳು. ಈ ಮಹತ್ವದ ಯೋಜನೆಗಳಿಗೆ ಅಂದು ವಿರೋಧ ವ್ಯಕ್ತಪಡಿಸಿದ್ದ ಮೋದಿ, ಈಗ ಯೂಟರ್ನ್ ಹೊಡೆದಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಯುಪಿಎ ಸರಕಾರದ ಕೂಸು ಜಿಎಸ್‌ಟಿಯನ್ನು ಮಧ್ಯರಾತ್ರಿ ಜಾರಿಗೊಳಿಸಲು ಹೊರಟಿದ್ದಾರೆ. ಮೋದಿ ಓರ್ವ ಬಾಯಿಬಡುಕ. ಅವರ ಸಾಧನೆ ಶೂನ್ಯ. ಮೋದಿ ಅವರು ಒಂದು ಬಾರಿ, ಎರಡು ಬಾರಿ ಜನರನ್ನು ಮೂರ್ಖರನ್ನಾಗಿ ಮಾಡಬಹುದು. ಆದರೆ, ಪದೇ ಪದೇ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಬಿಜೆಪಿಯವರಿಗೆ ಹೆದರಿ ರೈತರ ಸಾಲ ಮನ್ನಾ ಮಾಡಿಲ್ಲ. ಯಡಿಯೂರಪ್ಪ ಅವರಂತಹ ಸಾವಿರ ಜನ ಬಂದರು ಹೆದರುವುದಿಲ್ಲ. ತಾಕತ್ ಇದ್ದರೆ ಬಿಜೆಪಿಯ ರಾಜ್ಯ ಮುಖಂಡರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ರೈತರ ಸಾಲ ಮನ್ನಾ ಮಾಡಿಸಲಿ ಎಂದು ಸವಾಲು ಹಾಕಿದ ಅವರು, ರೈತರ ಸಮಸ್ಯೆಗಳ ಬಗ್ಗೆ ಪ್ರಧಾನಿ ಮುಂದೆ ಮಾತನಾಡಲು ಹಿಂಜರಿಯುವ ನೀವು ಹೇಡಿಗಳು ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಜನತೆ ಯಡಿಯೂರಪ್ಪನವರ ಮೂಗು ಹಿಡಿದು ಕೇಂದ್ರ ಸರಕಾರದಿಂದ ರೈತರ ಸಾಲ ಮನ್ನಾ ಮಾಡಿಸುವಂತೆ ಕೇಳಬೇಕು. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸುರೇಶ್ ಅಂಗಡಿ ಸಂಸತ್ತಿನಲ್ಲಿ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಲಿ. ನರೇಂದ್ರ ಮೋದಿ ಮೂಗು, ಕಿವಿ ಹಿಂಡುವ ಕೆಲಸವನ್ನು ಇವರು ಮಾಡಿ ತೋರಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಅಧಿಕಾರಕ್ಕೆ ಬಂದರೆ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ನಿಮ್ಮಪ್ಪನಾಣೆಗೂ ನೀವು ಅಧಿಕಾರಕ್ಕೆ ಬರುವುದಿಲ್ಲ. ದಲಿತರ ಮತಗಳಿಗಾಗಿ ಬಿಜೆಪಿ ನಡಿಗೆ ದಲಿತರ ಮನೆಗೆ ಆರಂಭಿಸಿದ್ದೀರಾ. ದಲಿತರ ಬಗ್ಗೆ ಕಳಕಳಿಯಿದ್ದರೆ ನಿಮ್ಮ ಮನೆಯ ಹೆಣ್ಣು ಅವರ ಮನೆಗೆ, ಅವರ ಮನೆಯ ಹೆಣ್ಣನ್ನು ನಿಮ್ಮ ಮನೆಗೆ ತೆಗೆದುಕೊಳ್ಳಿ ನೋಡೋಣ ಎಂದು ಮುಖ್ಯಮಂತ್ರಿ ಹೇಳಿದರು.







