ದೊಡ್ಡಪ್ಪನ ಕೊಲೆಗೈದ ಆರೋಪಿಗೆ ನ್ಯಾಯಾಂಗ ಬಂಧನ
ಮಾನಸಿಕ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ವೆನ್‌ಲಾಕ್ ಆಸ್ಪತ್ರೆಗೆ
ಪುತ್ತೂರು,ಜೂ.30 : ತನ್ನನ್ನು ನೋಡಿಕೊಳ್ಳಲೆಂದು ಮನೆಗೆ ಬಂದಿದ್ದ ದೊಡ್ಡಪ್ಪನನ್ನೇ ಮರದ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಆರೋಪಿ ಯುವಕನಿಗೆ ಪುತ್ತೂರು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ, ಮಾನಸಿಕ ಅಸ್ವಸ್ಥನಾಗಿರುವ ಹಿನ್ನಲೆಯಲ್ಲಿ ಆತನಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಆದೇಶಿಸಿದೆ.
ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಶೇಖಮಲೆ ಸಮೀಪದ ತಾರೆದೆಕೊಪ್ಪಲ ಎಂಬಲ್ಲಿ ಬುಧವಾರ ಸಂಜೆ ನಡೆದಿದ್ದ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಾರಗುಂದ ಗ್ರಾಮದ ಬೆಟ್ಟಗಿರಿ ನಿವಾಸಿ ಎಂ.ಎ.ದೇವಯ್ಯ(57 ) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ್ದ ಆರೋಪಿ ತನು ಯಾನೆ ರತನ್ (25)ನನ್ನು ಸಂಪ್ಯ ಪೊಲೀಸರು ಗುರುವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ, ಮಾನಸಿಕ ಅಸ್ವಸ್ಥನಾದ ಆತನನ್ನು ಸೂಕ್ತ ಚಿಕಿತ್ಸೆಗೊಳಪಡಿಸುವಂತೆ ಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೊಳಪಡಿಸಿದ ಪೊಲೀಸರು ಬಳಿಕ ಆತನನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಕೊಡಗು ಜಿಲ್ಲೆಯ ಬೆಟ್ಟಗಿರಿ ನಿವಾಸಿಯಾದ ದೇವಯ್ಯ ಅವರು ಕಳೆದ ಶನಿವಾರ ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಶೇಖಮಲೆ ಸಮೀಪದ ತಾರೆದೆ ಕೊಪ್ಪಲ ಎಂಬಲ್ಲಿರುವ ತನ್ನ ನಾದಿನಿಯ ಪತಿಯಾದ ಸುಂದರ ಗೌಡ ಅವರ ಮನೆಗೆ ಬಂದಿದ್ದರು. ಸುಂದರ ಗೌಡ ,ಅವರ ಪತ್ನಿ ಮತ್ತು ಪುತ್ರಿ ಬುಧವಾರ ಬೆಳಿಗ್ಗೆ ಮಾನಸಿಕ ಅಸ್ವಸ್ಥನಾದ ತನು ಯಾನೆ ರತನ್‌ನನ್ನು ದೇವಯ್ಯ ಅವರ ಜೊತೆ ಬಿಟ್ಟು ಆತನಿಗೆ ಔಷಧಿ ತರಲೆಂದು ಕಲ್ಲಡ್ಕಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ತನು ಯಾನೆ ರತನ್ ದೊಡ್ಡಪ್ಪನಾದ ದೇವಯ್ಯ ಅವರನ್ನು ಮನೆಯ ಬಚ್ಚಲು ಕೋಣೆಯ ಬಳಿ ದೂಡಿ ಹಾಕಿ,ಅವರಿಗೆ ಮರದ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ ಎಂಬ ಆರೋಪವಿದೆ.







