ತುಂಬೆ: ವಿದ್ಯಾರ್ಥಿ ಸಂಘದ ಉದ್ಘಾಟನೆ

ಬಂಟ್ವಾಳ, ಜೂ. 30: ವಿದ್ಯಾರ್ಥಿ ಸಂಸತ್ತು, ಸಂಘಗಳು ದೇಶದ ಸಂಸತ್ತಿನಂತೆಯೇ ಕಾರ್ಯ ನಿರ್ವಹಿಸಿದಾಗ ವಿದ್ಯಾರ್ಥಿಗಳಿಗೆ ಅದರ ಜ್ಞಾನ ಸಿಗುತ್ತದೆ ಮತ್ತು ಪ್ರಜಾಪ್ರಭೂತ್ವದ ಅರಿವು ಸಿಗುತ್ತದೆ ಎಂದು ಕುದ್ರೋಳಿ ಶ್ರೀನಾರಾಯಣಗುರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಸಂತ ಕುಮಾರ್ ಹೇಳಿದರು.
ತುಂಬೆ ವಿದ್ಯಾಸಂಸ್ಥೆಗಳ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿದ ಅವರು ನಾಯಕ, ನಾಯಕಿಯರಿಗೆ ಪ್ರಮಾಣವಚನ ಬೋಧಿಸಿದ ಬಳಿಕ ಮಾತನಾಡುತ್ತಿದ್ದರು.
ಒಬ್ಬ ವಿದ್ಯಾರ್ಥಿ ಉತ್ತಮ ಗುಣಲಕ್ಷಣವನ್ನು ಮೈಗೂಡಿಸಿಕೊಂಡಾಗ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯ. ಇರುವ ಅವಕಾಶವನ್ನು ಬಳಸಿಕೊಂಡು ನಾಯಕತ್ವದ ಗುಣಲಕ್ಷಣವನ್ನು ಅಳವಡಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಹೇಳಿದರು.
ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ಗಂಗಾಧರ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಸತ್ತಿನ ಸಲಹೆಗಾರ ದಿನೇಶ್ ಶೆಟ್ಟಿ ಅಳಿಕೆ ಪ್ರಸ್ತಾವನೆಗೈದರು. ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಶ್ರೀನಿವಾಸ ಕೆದಿಲ ಸ್ವಾಗತಿಸಿದರು.
ಕಚೇರಿ ಅಧೀಕ್ಷಕರಾದ ಅಬ್ದುಲ್ ಕಬೀರ್ ಬಿ., ಉಪನ್ಯಾಸಕರಾದ ಅಬ್ದುಲ್ ರಹಿಮಾನ್ ಡಿ.ಬಿ., ಡಾ. ವಿಶ್ವನಾಥ ಪೂಜಾರಿ, ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ ರೈ ಬಿ., ದೈಹಿಕ ಶಿಕ್ಷಣ ನಿರ್ದೇಶಕರಾದ ಸಾಯಿರಾಮ್ ನಾಯಕ್ ಉಪಸ್ಥಿತರಿದ್ದರು. ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ಉಪನ್ಯಾಸಕ ಬಿ.ಸು.ಭಟ್ ವಂದಿಸಿದರು. ಪಿಯುಸಿ ಪ್ರಥಮ ಕಲಾ ವಿಭಾಗದ ವಿದ್ಯಾರ್ಥಿನಿ ಅದಿತಿ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಹಾಗೂ ಪ್ರಕಾಶ್ ಸಹಕರಿಸಿದರು.







