ದೇಶದಲ್ಲಿ ದಲಿತ ವಿರೋಧಿ ಸರಕಾರದ ಆಡಳಿತ: ಕೆ.ಸಿ.ವೇಣುಗೋಪಾಲ್

ಬೆಳಗಾವಿ, ಜೂ.30: ದೇಶದಲ್ಲಿ ದಲಿತ ವಿರೋಧಿ ಸರಕಾರ ಆಡಳಿತ ನಡೆಸುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ನಗರದ ಅಥಣಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಗೋರಕ್ಷಣೆಯ ಹೆಸರಿನಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಆದರೆ, ಮೋದಿ ಈಗ ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ದಲಿತರ ಹತ್ಯೆ ಬಗ್ಗೆ ಮಾತನಾಡಿದ್ದಾರೆ ಎಂದು ಟೀಕಿಸಿದರು.
ನರೇಂದ್ರ ಮೋದಿ ನಿನ್ನೆ ಗುಜರಾತ್‌ನಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆಗಳು ಹಾಗೂ ದಲಿತರ ಪರವಾಗಿ ಆಡಿದ ಮಾತುಗಳು ರಾಜಕೀಯ ಪ್ರೇರಿತವಾದದ್ದು. ಗುಜರಾತ್ ಮತ್ತು ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವೇಣುಗೋಪಾಲ್ ದೂರಿದರು.
ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, ಉಡುಪಿಯಿಂದಲೇ ರಾಮ ಮಂದಿರ ನಿರ್ಮಾಣದ ಕೆಲಸ ಆರಂಭವಾಗಲಿದೆ ಎಂದು ಹೇಳಿಕೆ ನೀಡುವ ಮೂಲಕ, ರಾಜ್ಯದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರು ಮೋದಿ ಸರಕಾರದ ಮೂರು ವರ್ಷಗಳ ಪ್ರಗತಿ ವರದಿಯನ್ನು ತೋರಿಸಲಿ, ನಾವು ಸಿದ್ದರಾಮಯ್ಯ ಸರಕಾರದ ಸಾಧನೆಗಳನ್ನು ಜನತೆಯ ಮುಂದಿಡುತ್ತೇವೆ ಎಂದು ಅವರು ಹೇಳಿದರು.
ನರೇಂದ್ರ ಮೋದಿ ಸರಕಾರ ದೇಶದ ಜನತೆಗೆ ನೀಡಿದ್ದ ಶೇ.25ರಷ್ಟು ಭರವಸೆಗಳನ್ನು ಈಡೇರಿಸಿದ್ದರೆ, ಸಿದ್ದರಾಮಯ್ಯ ಸರಕಾರ ಶೇ.80ರಷ್ಟು ಭರವಸೆಗಳನ್ನ ಈಡೇರಿಸಿದೆ. ಈ ಸಮಾವೇಶ ಕಾಂಗ್ರೆಸ್ ಪಕ್ಷದ ಭವಿಷ್ಯ ಸೂಚಿಸುತ್ತಿದೆ. ಮುಂದಿನ ಒಂಭತ್ತು ತಿಂಗಳು ಕಾರ್ಯಕರ್ತರು ಶ್ರಮಿಸಿದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಪರವಾಗಿದ್ದಾರೆ. ತೊಂದರೆಯಲ್ಲಿ ಇರುವ ರೈತರಿಗೆ ಸ್ಪಂದಿಸಿ, ಅವರರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿರುವುದಕ್ಕೆ ಎಐಸಿಸಿ ಪರವಾಗಿ ಅಭಿನಂದಿಸುತ್ತೇನೆ. ಆದರೆ, ಯಡಿಯೂರಪ್ಪ ರೈತರ ಹೆಸರಲ್ಲಿ ಸಾಲ ಮನ್ನಾದ ರಾಜಕೀಯ ಡ್ರಾಮಾ ಮಾಡುತ್ತಿದ್ದಾರೆ. ಅವರಿಗೆ ತಾಕತ್ತು ಇದ್ದರೆ ಕೇಂದ್ರ ಸರಕಾರದಿಂದ ರೈತರ ಸಾಲಮನ್ನಾ ಮಾಡಿಸಲಿ ಎಂದು ವೇಣುಗೋಪಾಲ್ ಸವಾಲು ಹಾಕಿದರು.
ದಲಿತರ ಮನೆಗೆ ಭೇಟಿ ಉಪಹಾರ ಸೇವಿಸುತ್ತಿರುವ ಯಡಿಯೂರಪ್ಪ, ಮುಖ್ಯಮಂತ್ರಿಯಾಗಿದ್ದಾಗ ಯಾಕೆ ದಲಿತರ ಮನೆಗೆ ಹೋಗಲಿಲ್ಲ. ದಲಿತರ ಮನೆಗೆ ಹೋಗಿ ಹೊಟೇಲ್‌ನಿಂದ ತಿಂಡಿ ತರಿಸಿಕೊಂಡು ತಿನ್ನುತ್ತಿರುವವರಿಗೆ ದಲಿತರ ಬಗ್ಗೆ ಎಷ್ಟು ಕಾಳಜಿಯಿದೆ ಎಂದು ಅವರು ವ್ಯಂಗ್ಯವಾಡಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಸೈದ್ಧಾಂತಿಕ ವಿರೋಧಿ ಬಿಜೆಪಿ ವಿರುದ್ಧ ಯುದ್ಧಕ್ಕೆ ಹೋಗಬೇಕಿದೆ. ಬಿಜೆಪಿ ಐದು ವರ್ಷ ಭ್ರಷ್ಟಾಚಾರದ ಆಡಳಿತ ನೀಡಿತ್ತು. ನಾವು ಒಳ್ಳೆಯ ಆಡಳಿತ ನೀಡುವ ಭರವಸೆಯನ್ನು ಉಳಿಸಿಕೊಂಡಿದ್ದೇವೆ ಎಂದರು.
ಸಿದ್ದರಾಮಯ್ಯ ಬಡತನದ ಕುಟುಂಬದಿಂದ ಬಂದವರು. ಬಡವರಿಗಾಗಿ ಅನ್ನಭಾಗ್ಯ ಯೋಜನೆ, ಮಕ್ಕಳಿಗಾಗಿ ಬಿಸಿ ಊಟ, ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಪ್ರಧಾನಿ ಮೋದಿ ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ಮನ್ ಕೀ ಬಾತ್ ಮಾತನಾಡುತ್ತಾರೆ. ಆದರೆ, ರೈತರಿಗೆ ಏನು ಮಾಡಿಲ್ಲ. ರೈತರ ಸಾಲಮನ್ನಾ ಮಾಡುತ್ತಿಲ್ಲ ಎಂದು ಅವರು ಕಿಡಿಗಾರಿದರು.
ಜಿಎಸ್‌ಟಿಯನ್ನು ದೇಶಾದ್ಯಂತ ಜಾರಿಗೆ ತರಲಾಗುತ್ತಿದೆ. ಆದರೆ, ರಾತ್ರಿ 12 ಗಂಟೆಗೆ ಯಾವ ಪುರುಷಾರ್ಥಕ್ಕಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ದೇಶಕ್ಕೆ ಮಧ್ಯರಾತ್ರಿ ಸ್ವಾತಂತ್ರ ಬಂದಿದೆ. ಅದರಂತೆ, ಜಿಎಸ್‌ಟಿ ಕಾರ್ಯಕ್ರಮ ಮಾಡುವ ಅಗತ್ಯವಿರಲಿಲ್ಲ ಎಂದು ಪ್ರಧಾನಿಯನ್ನು ಪರಮೇಶ್ವರ್ ತರಾಟೆಗೆ ತೆಗೆದುಕೊಂಡರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, 2018ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕನಿಷ್ಠ 12 ಸ್ಥಾನ ಗೆಲ್ಲುವ ಪ್ರತಿಜ್ಞೆ ಮಾಡುತ್ತೇವೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ. ಭಿನ್ನಮತ ಇದೇ ಎಂಬುದು ಸುಳ್ಳು ಸೃಷ್ಠಿ ಎಂದರು.
ಬಿಜೆಪಿ ಭದ್ರಕೋಟೆಯನ್ನು ನಾವು ಭೇದಿಸುತ್ತೇವೆ. ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದು, ಅವರು ಮುಂದಿನ ಚುನಾವಣೆಯಲ್ಲಿ ಅಥಣಿಯಿಂದ ಸ್ಪರ್ಧಿಬೇಕು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ರಾಯಭಾಗ ದಿಂದ ಸ್ಪರ್ಧಿಸಬೇಕೆಂದು ಅವರು ಮನವಿ ಮಾಡಿದರು.
ಸಮಾವೇಶದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







