ಅಭಿವೃದ್ಧಿಯಲ್ಲಿ ರಾಜ್ಯ ಸರಕಾರಕ್ಕೆ ಅಗ್ರಸ್ಥಾನ: ಸತೀಶ್ ಜಾರಕಿಹೊಳಿ
ಬೆಳಗಾವಿ, ಜೂ.30: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಅಭಿವೃದ್ಧಿಯಲ್ಲಿ ದೇಶದಲ್ಲೆ ಅಗ್ರಸ್ಥಾನದಲ್ಲಿದೆ. ಆದರೆ, ನಮ್ಮ ಸಾಧನೆಗೆ ಪ್ರಚಾರದ ಕೊರತೆಯಿದೆ ಎಂದು ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶುಕ್ರವಾರ ನಗರದ ಅಥಣಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಉತ್ತಮ ಕೆಲಸಗಳನ್ನು ಮಾಡಿದೆ ಎಂದರು.
ಇಂಧನ, ನೀರಾವರಿ ಸೇರಿ ಎಲ್ಲ ಇಲಾಖೆ ಕೋಟ್ಯಾಂತರ ರೂ.ವೆಚ್ಚ ಮಾಡಲಾಗಿದೆ. ಅಥಣಿ, ಕಾಗವಾಡ ಮತಕ್ಷೇತ್ರದಲ್ಲಿ ಗೆಲವು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ. ನನ್ನ ಬದ್ಧತೆಯನ್ನ 2013ರಲ್ಲಿ ತೋರಿಸಿದ್ದೇನೆ. ಅದೇ ರೀತಿ 2018ರಲ್ಲೂ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.
ನನ್ನ ಮತ್ತು ಸಹೋದರರ ಮಧ್ಯೆ ಇರುವುದು ವೈಯಕ್ತಿಕ ವಿಚಾರದ ಭಿನ್ನಾಭಿಪ್ರಾಯ. ಅದು ಪಕ್ಷದ ಸಂಘಟನೆ ಮೇಲೆ ಯಾವುದೆ ಪರಿಣಾಮ ಬೀರುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಕೈಯಲ್ಲಿ ಸ್ಟೇರಿಂಗ್ ಇದೇ. ಅವರೇ ಸರಿಯಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದ ಸತೀಶ್ ಜಾರಕಿಹೊಳಿ ತಿಳಿಸಿದರು.
ಅಸಮಾಧಾನ: ಇಂದಿನ ಸಮಾವೇಶದ ವೇದಿಕೆಯಲ್ಲಿ ನನ್ನ ಭಾವಚಿತ್ರವನ್ನು ಹಾಕಿಲ್ಲ. ನನ್ನ ಭಾವಚಿತ್ರವನ್ನು ಹಾಕುವ ಕಾರ್ಯಕರ್ತರು ರಾಜ್ಯದ ಎಲ್ಲೆಡೆ ಇದ್ದಾರೆ. ಹಳ್ಳಿಯಿಂದ ದಿಲ್ಲಿವರೆಗೂ ಸತೀಶ್ ಜಾರಕಿಹೊಳಿ ಒಂದೇ ಮಾತನ್ನು ಹೇಳುತ್ತಾನೆ. ನಾನು ಪಕ್ಷಕ್ಕಾಗಿ ದುಡಿಯುತ್ತಿರುವುದನ್ನ ಪರಿಗಣಿಸಬೇಕು. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಅವರು ತಮ್ಮ ಅಸಮಾಧಾನ ಹೊರಹಾಕಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ರಾಜ್ಯ ಸರಕಾರವು ರೈತರ ಸಾಲ ಮನ್ನಾ ಮಾಡಿದ್ದರಿಂದ ಬಿಜೆಪಿ ಯವರು ಹೊದ್ದುಕೊಂಡು ಮಲಗುವಂತಾಗಿದೆ. ಉತ್ತರ ಕರ್ನಾಟಕ ಭದ್ರ ಎಂದುಕೊಂಡಿದ್ದ ಯಡಿಯೂರಪ್ಪಗೆ, ಕಾಂಗ್ರೆಸ್ ಸಮಾವೇಶಕ್ಕೆ ಸಿಕ್ಕಿರುವ ಜನ ಬೆಂಬಲ ನೋಡಿ ಅರ್ಥವಾಗಿರುತ್ತದೆ ಎಂದರು.
ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ನಡೆದಿರುವ ಕಾಂಗ್ರೆಸ್ ಸಮಾವೇಶವು, ಪಕ್ಷಕ್ಕೆ ಶುಭ ಸೂಚಕವಾಗಿದೆ. ಅಥಣಿ ಅಭಿವೃದ್ಧಿ ಆಗಿದ್ದು ಕಾಂಗ್ರೆಸ್ ಪಕ್ಷದಿಂದ. ಅಥಣಿ ಶಾಸಕರರು ಎಲ್ಲವನ್ನು ಲಘುವಾಗಿ ಮಾತನಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯತೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಶಿಸ್ತು ಪಕ್ಷವನ್ನು ಗೆಲ್ಲಿಸುತ್ತದೆ ಎಂದು ಅವರು ಹೇಳಿದರು.







