ಜಿ.ಎಸ್.ಟಿ. ತೆರಿಗೆ ಪದ್ಧತಿಗೆ ಕನ್ನಡ ಚಿತ್ರರಂಗದ ವಿರೋಧ

ಬೆಂಗಳೂರು, ಜೂ.30: ಕೇಂದ್ರ ಸರಕಾರದ ಜಿ.ಎಸ್.ಟಿ. ಜಾರಿಯಿಂದ ಚಿತ್ರೋದ್ಯಮ ಕಂಗಾಲಾಗಿದೆ. ಜಿ.ಎಸ್.ಟಿ.ಯಿಂದ ಕನ್ನಡ ಚಿತ್ರರಂಗ ಅವನತಿಯ ಅಂಚಿಗೆ ತಲುಪಲಿದ್ದು, ಚಿತ್ರಮಂದಿರಗಳೂ ಮುಚ್ಚುವ ಆತಂಕ ಎದುರಾಗಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಾ.ರಾ.ಗೋವಿಂದು, ಜಿ.ಎಸ್.ಟಿ. ತೆರಿಗೆ ಪದ್ಧತಿ ಕನ್ನಡ ಚಿತ್ರೋದ್ಯಮಕ್ಕೆ ಮಾರಕವಾಗಿದ್ದು, ಕನ್ನಡ ಚಿತ್ರೋದ್ಯಮ ಸಂಪೂರ್ಣ ನೆಲಕಚ್ಚಲಿದೆ. ಆದ್ದರಿಂದ ಕನ್ನಡ ಸಹಿತ ಪ್ರಾದೇಶಿಕ ಚಿತ್ರೋದ್ಯಮವನ್ನು ಜಿ.ಎಸ್.ಟಿ. ತೆರಿಗೆ ಪದ್ಧತಿಯಿಂದ ಹೊರಗಿಡುವಂತೆ ಮಂಡಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಸಂಪೂರ್ಣ ತೆರಿಗೆ ವಿನಾಯಿತಿ ಹೊಂದಿರುವ ಕನ್ನಡ ಚಿತ್ರೋದ್ಯಮ ಜಿ.ಎಸ್.ಟಿ. ಜಾರಿಯಿಂದ ಶೇ.18ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಜೊತೆಗೆ ನಿರ್ಮಾಣ, ಹಂಚಿಕೆ ಹಾಗೂ ಪ್ರದರ್ಶನ ವಿಭಾಗಗಳು ಪ್ರತ್ಯೇಕ ತೆರಿಗೆ ಪಾವತಿಸಬೇಕಾಗುತ್ತದೆ. ಇದು ಕನ್ನಡ ಚಿತ್ರೋದ್ಯಮಕ್ಕೆ ಮಾರಕವಾಗಲಿದೆ ಎಂದರು.
ಬಾಲಿವುಡ್ ಚಿತ್ರೋದ್ಯಮ ಶೇಕಡಾ 43ರಷ್ಟು ತೆರಿಗೆ ಪಾವತಿಸುತ್ತಿತ್ತು. ಅದೇ ರೀತಿ ಪರಭಾಷೆಯ ಚಿತ್ರೋದ್ಯಮ ಶೇ.18 ತೆರಿಗೆ ಪಾವತಿಸುತ್ತಿದ್ದವು. ಜಿ.ಎಸ್.ಟಿ.ಯಿಂದ ಅವರ ತೆರಿಗೆ ಪ್ರಮಾಣ ಶೇ. 18ಕ್ಕೆ ಇಳಿದು ಅವರಿಗೆ ಲಾಭವಾಗಲಿದೆ. ಆದರೆ ಇದು ಕನ್ನಡ ಸಹಿತ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರೋದ್ಯಮಕ್ಕೆ ಮಾರಕವಾಗಲಿದೆ ಎಂದು ಅವರು ಹೇಳಿದರು.







