ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು:ಭುಗಿಲೆದ್ದ ರೈತರ ಆಕ್ರೋಶ
ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣದಲ್ಲಿ ರಸ್ತೆತಡೆ

ಮಂಡ್ಯ, ಜೂ.30: ಕಾವೇರಿ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಒಳಹರಿವು ಹೆಚ್ಚಾಗುತ್ತಿದ್ದಂತೆ ಜಲಾಶಯದಿಂದ ನದಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಜಿಲ್ಲೆಯಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ.
ಬರಡಾಗಿರುವ ಜಲಾಶಯಕ್ಕೆ ಇದೀಗ ನೀರು ಹರಿದುಬರುತ್ತಿರುವ ಬೆನ್ನಲ್ಲೇ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲೆಯ ವಿವಿಧೆಡೆ ಶುಕ್ರವಾರ ರೈತರು, ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ನಗರದಲ್ಲಿ ರೈತಸಂಘದ ಎರಡೂ ಬಣಗಳ ಕಾರ್ಯಕರ್ತರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಸ್ತೆತಡೆ ನಡೆಸಿದರೆ, ಶ್ರೀರಂಗಪಟ್ಟಣದ ಕಾವೇರಿನದಿಯ ಸ್ನಾನಘಟ್ಟದ ಬಳಿ ರೈತಸಂಘ ಮತ್ತು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ನದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಮದ್ದೂರಿನಲ್ಲೂ ರಸ್ತೆತಡೆ ನಡೆಯಿತು.
ರೈತಸಂಘದ ಎರಡು ಬಣಗಳ ಮುಖಂಡರಾದ ಶಂಭೂನಹಳ್ಳಿ ಸುರೇಶ್, ಇಂಡುವಾಳು ಸಿದ್ದೇಗೌಡ, ಹನಿಯಂಬಾಡಿ ನಾಗರಾಜು, ಬಿ.ಬೊಮ್ಮೇಗೌಡ, ನಾಗಣ್ಣ, ನವೀನ್, ಎಚ್.ಚಂದ್ರಶೇಖರ್, ಇಂಡುವಾಳು ಬಸವರಾಜು, ಸುಧೀರ್‌ಕುಮಾರ್, ತಮ್ಮಯ್ಯ, ಮಹೇಶ್ ನೇತೃತ್ವದಲ್ಲಿ ನಗರದಲ್ಲಿ ಹೆದ್ದಾರಿತಡೆ ನಡೆಸಿದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮು, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ, ಇತರ ಸಂಘಟನೆಗಳ ಮುಖಂಡರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ಕಾವೇರಿ ನದಿಗಿಳಿದ ರೈತಸಂಘದ ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಮರಳಗಾಲ ಕೃಷ್ಣೇಗೌಡ, ಎಂ.ವಿ.ಕೃಷ್ಣ, ಉಂಡುವಾಡಿ ಮಹದೇವು, ಕಸ್ತೂರಿ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮತ್ತು ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮೂರು ವರ್ಷದಿಂದ ಮಳೆಯಿಲ್ಲದೆ ಸತತ ಬರಗಾಲದಿಂದ ಜಿಲ್ಲೆಯ ರೈತಾಪಿ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಪಶುಪಕ್ಷಿಗಳೂ ನೀರಿಲ್ಲದೆ ಪರದಾಡಿವೆ. ಇದೀಗ ಜಲಾಶಯಕ್ಕೆ ನೀರು ಬರುತ್ತಿದೆ. ಆದರೆ, ಸರಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಈ ಹಿಂದೆ ಜಿಲ್ಲೆ ಮತ್ತು ರಾಜ್ಯದ ರೈತರನ್ನು ಕಡೆಗಣಿಸಿ ಸುಪ್ರೀಂಕೋರ್ಟ್ ಆದೇಶ ಮುಂದಿಟ್ಟುಕೊಂಡು ರಾಜ್ಯ ಸರಕಾರಗಳು ತಮಿಳುನಾಡಿಗೆ ನೀರುಹರಿಸಿ ಅನ್ಯಾಯ ಮಾಡಿವೆ. ಜಲಾಶಯಕ್ಕೆ ಮೂರು ದಿನದಿಂದ ಕೇವಲ ಮೂರು ಅಡಿ ನೀರು ಬಂದಿದ್ದು, ತಮಿಳುನಾಡಿಗೆ ನೀರುಹರಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕನ್ನಾಂಬಾಡಿ ಅಣೆಕಟ್ಟೆ ತುಂಬುವ ಮೊದಲೇ ತಮಿಳುನಾಡಿಗೆ ನೀರುಹರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಎಂ.ಬಿ.ಪಾಟೀಲ್ ನಾಡಿನ ರೈತರ ಬೆನ್ನಿಗೆ ಚೂರಿಹಾಕಿದ್ದಾರೆ. ಸರಕಾರ ರೈತರ ಜತೆ ಚೆಲ್ಲಾಟವಾಡಲು ಹೊರಟಿದೆ ಎಂದೂ ಅವರು ತರಾಟೆಗೆ ತೆಗೆದುಕೊಂಡರು.
ಕೂಡಲೇ ಸರಕಾರ ಮತ್ತು ಜಿಲ್ಲಾಡಳಿತ ಜಲಾಶಯದಿಂದ ನದಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ಜಲಾಶಯ ತುಂಬುವ ಮೊದಲು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರುಹರಿಸಬಾರದು. ನಾಲೆಗಳ ಮೂಲಕ ಕೆರೆಕಟ್ಟೆಗಳನ್ನು ತುಂಬಿಸಬೇಕು. ಇಲ್ಲದಿದ್ದರೆ ಉಗ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.







