ನಾಪತ್ತೆಯಾದ ವೃದ್ಧೆಗಾಗಿ ಕುಟುಂಬಸ್ಥರ ಹುಡುಕಾಟ: ಜನಸಂದಣಿ ಪ್ರದೇಶದಲ್ಲಿ ಫ್ಲೆಕ್ಸ್ ಹಿಡಿದು ಯಾಚನೆ

ಮಂಗಳೂರು, ಜೂ.30: ಭಟ್ಕಳದ ಮುಗ್ಗಿನಂಡ ಎಂಬಲ್ಲಿನ ಬೀಬಿ ಝುಲೇಖಾ (60) ಎಂಬವರು ಜೂ.22ರಿಂದ ಕಾಣೆಯಾಗಿದ್ದು, ಅವರ ಕುಟುಂಬಸ್ಥರು ಇದೀಗ ಮಂಗಳೂರಿನ ಜನಸಂದಣಿ ಪ್ರದೇಶದಲ್ಲಿ ಫ್ಲೆಕ್ಸ್ ಹಿಡಿದು ನಿಂತು ಝುಲೇಖಾರ ಪತ್ತೆಗಾಗಿ ಸಾರ್ವಜನಿಕರ ಸಹಾಯ ಯಾಚಿಸತೊಡಗಿದ್ದಾರೆ.
ಮಧ್ಯಮ ವರ್ಗದ ಕುಟುಂಬದ ಬೀಬಿ ಝುಲೇಖಾರಿಗೆ ಇಬ್ಬರು ಮಕ್ಕಳು. ಮಗ ಹೆಮ್ಮಾಡಿ ಮತ್ತು ಮಗಳು ಗೋವಾದಲ್ಲಿ ನೆಲೆಸಿದ್ದಾರೆ. ಪತಿಯನ್ನು ಅಗಲಿರುವ ಝುಲೇಖಾ ಮೂಗಿಯಾಗಿದ್ದು, ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಈದುಲ್ ಫಿತ್ರ್‌ಗಾಗಿ ಹೆಮ್ಮಾಡಿಯಲ್ಲಿರುವ ಮೂವರು ಮೊಮ್ಮಕ್ಕಳಿಗೆ ನೀಡಲೆಂದು ಹೊಸ ಬಟ್ಟೆ ಬರೆಯೊಂದಿಗೆ ಮನೆಯಿಂದ ಹೊರಟ ಇವರು, ಹೆಮ್ಮಾಡಿಗೆ ತಲುಪಿಲ್ಲ. ತನ್ನ ಮನೆಗೂ ಮರಳಲಿಲ್ಲ.
ಹಾಗಾಗಿ ಮಂಗಳೂರಿಗೆ ಬಂದಿರಬಹುದು ಎಂದು ಭಾವಿಸಿ ಅವರ ಮಕ್ಕಳು, ಸಹೋದರಿಯ ಮಕ್ಕಳು ಸೇರಿದಂತೆ ಕುಟುಂಬಸ್ಥರು ಜೂ.23ರಿಂದ ಮಂಗಳೂರಿನಲ್ಲಿ ಹುಡುಕಾಟದಲ್ಲಿ ತೊಡಗಿದ್ದಾರೆ. ಮಸೀದಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಫ್ಲೆಕ್ಸ್ ಹಿಡಿದು ಜನರ ಗಮನ ಸೆಳೆಯುತ್ತಿದ್ದಾರೆ.
ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಝುಲೇಖಾರ ಸಹೋದರಿಯ ಪುತ್ರ ಸೈಯದ್ ಅಬ್ರಾರ್, "ಕಳೆದೊಂದು ವರ್ಷದಿಂದ ನನ್ನ ಚಿಕ್ಕಮ್ಮ ಮನೆಯಿಂದ ಹೊರಟವರಲ್ಲ. ಈ ಹಿಂದೆ ಮೂರ್ನಾಲ್ಕು ಬಾರಿ ಹೆಮ್ಮಾಡಿಯಲ್ಲಿರುವ ಮಗನ ಮನೆ ಬಂದು ಹೋಗಿದ್ದರೂ ಇದೇ ಮೊದಲ ಬಾರಿಗೆ ಹೆಮ್ಮಾಡಿಗೆ ಹೊರಟು ಬಂದವರು ಕಾಣೆಯಾಗಿದ್ದಾರೆ. ಎಲ್ಲಿದ್ದಾರೆ ಎಂಬ ಬಗ್ಗೆ ಸುಳಿವು ಸಿಗುತ್ತಿಲ್ಲ. ನಾವು ಕಳೆದೊಂದು ವಾರದಿಂದ ಹುಡುಕಾಟ ಮಾಡುತ್ತಲೇ ಇದ್ದೇವೆ. ಆದರೆ ಪ್ರಯೋಜನವಾಗಿಲ್ಲ. ಇಲ್ಲಿನ ಕೆಲವು ಮಂದಿ ಇವರನ್ನು ಕಂಡಿದ್ದೇನೆ ಎಂದು ಹೇಳಿದ್ದಾರೆ. ಅದರಂತೆ ಆ ಪ್ರದೇಶಕ್ಕೆ ಭೇಟಿ ನೀಡಿ ಹುಡುಕಾಡಿದ್ದೇವೆ. ಈ ಬಗ್ಗೆ ಭಟ್ಕಳ ಠಾಣೆಗೆ ದೂರು ನೀಡಿದ್ದೇವೆ. ಕೊನೆಗೆ ನಾವೇ ಸ್ವತ: ಈ ಫ್ಲೆಕ್ಸ್ ಹಿಡಿದು ನಿಂತಿದ್ದೇವೆ. ಯಾರಾದರೂ ಚಿಕ್ಕಮ್ಮ (ಬೀಬಿ ಝುಲೇಖಾ)ನನ್ನು ನೋಡಿದರೆ ನಮ್ಮ ಗಮನಕ್ಕೆ (ಮೊ.ಸಂ:9964279080 ) ತನ್ನಿ ಎಂದು ಮನವಿ ಮಾಡಿದ್ದಾರೆ.








