ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ: ಸಾಫ್ಟ್‌ವೇರ್ ಇಂಜಿನಿಯರ್ ಬಂಧನ

ಬೆಂಗಳೂರು, ಜೂ.30: ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆದು ಟ್ವೀಟ್‌ಗಳನ್ನು ಮಾಡುತ್ತಿದ್ದ ಆರೋಪದ ಮೇಲೆ ಸಾಫ್ಟ್‌ವೇರ್ ಇಂಜಿನಿಯರ್ ಓರ್ವನನ್ನು ಸಿಐಡಿಯ ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಮಧುಸೂದನ್(30) ಎಂಬಾತ ಬಂಧಿತ ಸಾಫ್ಟ್‌ವೇರ್ ಇಂಜಿನಿಯರ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆದು ಮುಖ್ಯಮಂತ್ರಿಗಳ ಹೆಸರಿನಲ್ಲಿ ಟ್ವೀಟ್‌ಗಳನ್ನು ಮಾಡುತ್ತಿದ್ದ ಬಗ್ಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರು 2016ರ ಡಿಸೆಂಬರ್ 29ರಂದು ಸಿಐಡಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು.
ಪ್ರಕರಣ ಸಂಬಂಧ ತನಿಖೆ ಆರಂಭಿಸಿದ ಸೈಬರ್ ಕ್ರೈಂ ಪೊಲೀಸರು, ಶುಕ್ರವಾರ ಸಂಜೆ ಮಂಡ್ಯ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಮಧುಸೂದನ್ ಎಂಬಾತನನ್ನು ಬಂಧಿಸಿದ್ದಾರೆ. ಈತ ನಕಲಿ ಟ್ವಿಟ್ಟರ್ ಖಾತೆ ತೆರೆದ ಬಗ್ಗೆ ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸೈಬರ್‌ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಎಂ.ಡಿ.ಶರತ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಸಿಬ್ಬಂದಿಗಳಾದ ಕೃಷ್ಣೋಜಿರಾವ್, ಎಸ್.ಕೆ.ಶಿವಕುಮಾರ್, ಜಿ.ಮುನಿರತ್ನಂ, ವಿ.ಶ್ರೀನಾಥರೆಡ್ಡಿ, ವಿನೋದ್‌ಕುಮಾರ್ ಯಶಸ್ವಿಯಾಗಿದ್ದಾರೆ ಎಂದು ಸೈಬರ್ ಕ್ರೈಂ ಪೊಲೀಸ್ ಪ್ರಕಟನೆ ತಿಳಿಸಿದೆ.







