ಪತ್ರಕರ್ತರಿಬ್ಬರಿಗೆ ಜೈಲು ಶಿಕ್ಷೆ : ಪ್ರಕರಣವನ್ನು ಬಗೆಹರಿಸಲು ಹೈಕೋರ್ಟ್ ಸಲಹೆ
ಬೆಂಗಳೂರು, ಜೂ.30: ಅವಹೇಳನಕಾರಿ ವರದಿಗಳನ್ನು ಪ್ರಕಟಿಸಿದ್ದಾರೆನ್ನುವ ಆರೋಪದ ಮೇಲೆ ವಿಧಾನಸಭೆ ಹಕ್ಕು ಬಾಧ್ಯತಾ ಸಮಿತಿಯು ಇಬ್ಬರು ಪತ್ರಕರ್ತರಿಗೆ ಜೈಲು ಶಿಕ್ಷೆ ನೀಡಿರುವ ಪ್ರಕರಣವನ್ನು ನಿಮ್ಮಲ್ಲಿಯೇ ಬಗೆಹರಿಸಿಕೊಳ್ಳಲು ಸಾಧ್ಯವೇ ಹೇಗೆ ಎಂಬುದನ್ನು ಪರಿಶೀಲಿಸಿ ಎಂದು ಹೈಕೋರ್ಟ್, ಸರಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದೆ.
ಈ ಸಂಬಂಧ ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಅನಿಲ್‌ರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ವಾದಿಸಿ, ಪತ್ರಕರ್ತರಿಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತ್ತಿನಲ್ಲಿ ಇರಿಸಲು ಸಾಧ್ಯವಿಲ್ಲ. ಅಲ್ಲದೆ, ಶಾಸನ ಸಭೆ ಮತ್ತು ಸ್ಪೀಕರ್ ಅವರ ಸಮ್ಮುಖದಲ್ಲಿಯೇ ಈ ವಿಚಾರ ಚರ್ಚೆಯಾಗಬೇಕಿದೆ. ಹೀಗಾಗಿ, ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಅನಿಲ್‌ರಾಜ್ ಅವರು ಬೇಷರತ್ತಾಗಿ ಶರಣಾಗಬೇಕಿದೆ ಎಂದು ಪೀಠಕ್ಕೆ ತಿಳಿಸಿದರು. ಅಲ್ಲದೆ, ಪತ್ರಕರ್ತರಿಗೆ ಜೈಲು ಶಿಕ್ಷೆ ನೀಡಿರುವ ಪ್ರಕರಣವನ್ನು ಸ್ಪೀಕರ್ ಹಾಗೂ ವಿಧಾನಸಭೆ ಹಕ್ಕುಬಾಧ್ಯತಾ ಸಮಿತಿಯೇ ಇತ್ಯರ್ಥಪಡಿಸಿಕೊಳ್ಳುತ್ತದೆಯೇ ಎಂಬುದರ ಬಗ್ಗೆ ಮುಖ್ಯಮಂತ್ರಿಗಳಿಂದ ವಿವರಣೆ ಪಡೆದು ಸಲ್ಲಿಸುವುದಾಗಿ ಪೀಠಕ್ಕೆ ತಿಳಿಸಿದರು.