ಕಾನ್ಫಡರೇಶನ್ ಕಪ್: ಜರ್ಮನಿ ಫೈನಲ್‌ಗೆ ಲಗ್ಗೆ

ಸೋಚಿ(ರಶ್ಯ), ಜೂ.30: ಲಿಯೊನ್ ಗೋರೆಟ್ಜಾ ಬಾರಿಸಿದ ಅವಳಿ ಗೋಲುಗಳ ನೆರವನಿಂದ ಮೆಕ್ಸಿಕೊ ತಂಡವನ್ನು 4-1 ಗೋಲುಗಳ ಅಂತರದಿಂದ ಮಣಿಸಿದ ಜರ್ಮನಿ ತಂಡ ಕಾನ್ಫಡರೇಶನ್ ಕಪ್‌ನಲ್ಲಿ ಫೈನಲ್‌ಗೆ ತಲುಪಿದೆ.
ವಿಶ್ವಕಪ್‌ನಲ್ಲಿ 8 ಬಾರಿ ಹಾಗೂ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಆರು ಬಾರಿ ಫೈನಲ್‌ಗೆ ತಲುಪಿರುವ ಜರ್ಮನಿ ಇದೇ ಮೊದಲ ಬಾರಿ ಕಾನ್ಫಡರೇಶನ್ ಕಪ್ ಫೈನಲ್‌ಗೆ ಪ್ರವೇಶಿಸಿದೆ.
ಆಕ್ರಮಣಕಾರಿ ಮಿಡ್‌ಫೀಲ್ಡರ್ ಗೋರೆಟ್ಜಾ ಆರು ಹಾಗೂ ಎಂಟನೆ ನಿಮಿಷದಲ್ಲಿ ಗೋಲು ಬಾರಿಸಿ ವಿಶ್ವ ಚಾಂಪಿಯನ್ ಜರ್ಮನಿಗೆ ಆರಂಭಲ್ಲೇ ಮೇಲುಗೈ ಒದಗಿಸಿಕೊಟ್ಟರು. ಟಿಮೊ ವೆರ್ನರ್(59ನೆ ನಿಮಿಷ) ಹಾಗೂ ಅಮಿನ್ ಯೂನಿಸ್(90 ನಿಮಿಷ) ದ್ವಿತೀಯಾರ್ಧದಲ್ಲಿ ತಲಾ ಒಂದು ಗೋಲು ಬಾರಿಸಿದರು.
ಮೆಕ್ಸಿಕೋ ತಂಡದ ಪರ ಮಾರ್ಕೊ ಫ್ಯಾಬಿಯನ್ 89ನೆ ನಿಮಿಷದಲ್ಲಿ ಸಮಾಧಾನಕರ ಗೋಲು ಬಾರಿಸಿದರು.
ಜರ್ಮನಿ ತಂಡ ರವಿವಾರ ಪೀಟರ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚಿಲಿ ತಂಡವನ್ನು ಎದುರಿಸಲಿದೆ. ಮಾಸ್ಕೋದಲ್ಲಿ ಮೂರನೆ ಸ್ಥಾನಕ್ಕಾಗಿ ನಡೆಯಲಿರುವ ಪ್ಲೇ-ಆಫ್ ಪಂದ್ಯದಲ್ಲಿ ಮೆಕ್ಸಿಕೊ ತಂಡ ಪೋರ್ಚುಗಲ್ ತಂಡವನ್ನು ಎದುರಿಸಲಿದೆ.
ಪರಿಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಬೇಕೆಂಬ ಗುರಿ ನಮ್ಮ ಮುಂದಿದ್ದು, ನಾವು ಪ್ರಶಸ್ತಿ ಜಯಿಸಲು ಬಯಸಿದ್ದೇವೆ ಎಂದು ಗೋರೆಟ್ಜಾ ಹೇಳಿದ್ದಾರೆ.
ಕಳೆದ ಗುರುವಾರ ಚಿಲಿ ಹಾಗೂ ಜರ್ಮನಿ ತಂಡಗಳು ಕೊನೆಯ ಬಾರಿ ಮುಖಾಮುಖಿಯಾಗಿದ್ದು, ಕೊಪಾ ಅಮೆರಿಕ ಚಾಂಪಿಯನ್ ಚಿಲಿ ತಂಡ ಜರ್ಮನಿಯ ವಿರುದ್ಧ 1-1 ರಿಂದ ಡ್ರಾ ಸಾಧಿಸಿತ್ತು.
ನಾವು ಈಗಾಗಲೇ ಚಿಲಿ ವಿರುದ್ಧ ಗ್ರೂಪ್ ಹಂತದಲ್ಲಿ ಆಡಿದ್ದೇವೆ. ನಮಗೆ ಆ ತಂಡದ ಬಗ್ಗೆ ಚೆನ್ನಾಗಿ ಗೊತ್ತಿದೆ. ಚಿಲಿ ಟೂರ್ನಮೆಂಟ್‌ನಲ್ಲಿ ನಾನು ನೋಡಿದಂತಹ ಒಂದು ಸ್ಪರ್ಧಾತ್ಮಕ ತಂಡವಾಗಿದೆ ಎಂದು ಜರ್ಮನಿಯ ನಾಯಕ ಜುಲಿಯನ್ ಡ್ರಾಕ್ಲೆರ್ ಹೇಳಿದ್ದಾರೆ.
ರಶ್ಯದಲ್ಲಿ ತಲಾ ಮೂರು ಗೋಲುಗಳನ್ನು ಬಾರಿಸಿರುವ ಗೋರೆಟ್ಜಾ ಹಾಗೂ ವೆರ್ನರ್ ಟೂರ್ನಮೆಂಟ್‌ನ ಜಂಟಿ ಸ್ಕೋರರ್ ಆಗಿದ್ದಾರೆ.
ಜರ್ಮನಿಯ ಮುಖ್ಯ ಕೋಚ್ ಜೊಕಿಮ್ ಲಾ 20ರ ಹರೆಯದ ಬೆಂಜಮಿನ್ ಹೆನ್ರಿಕ್ಸ್‌ರನ್ನು ಕಣಕ್ಕಿಳಿಸಿ ಅಚ್ಚರಿ ಮೂಡಿಸಿದರು. ಮೂರನೆ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಹೆನ್ರಿಕ್ಸ್ ರಶ್ಯದಲ್ಲಿ ಮೊದಲ ಪಂದ್ಯವನ್ನಾಡಿದ್ದಾರೆ.
ಹೆನ್ರಿಕ್ಸ್‌ಗೆ ಅವಕಾಶ ನೀಡಿರುವ ಕೋಚ್ ಹೆಜ್ಜೆ ಬೇಗನೆ ಫಲ ನೀಡಿತು. ಹೆನ್ರಿಕ್ಸ್ ನೀಡಿದ್ದ ಪಾಸ್‌ನ ನೆರವಿನಿಂದ ಗೊರ್ಟೆಝಾ ಆರನೆ ನಿಮಿಷದಲ್ಲಿ ಗೋಲು ಖಾತೆ ತೆರೆದರು. 8ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಗೋರೆಟ್ಜಾ ಮೆಕ್ಸಿಕೊ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು.
ಈ ಹಿಂದಿನ ಎಲ್ಲ ಮೂರು ಗ್ರೂಪ್ ಪಂದ್ಯಗಳಲ್ಲಿ ನ್ಯೂಝಿಲೆಂಡ್, ರಶ್ಯ ಹಾಗೂ ಪೋರ್ಚುಗಲ್ ವಿರುದ್ಧ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡಿದ್ದ ಮೆಕ್ಸಿಕೊ ನ್ಯೂಝಿಲೆಂಡ್, ರಶ್ಯ ತಂಡವನ್ನು ಮಣಿಸಿತ್ತು ಹಾಗೂ ಪೋರ್ಚುಗಲ್ ವಿರುದ್ಧ ಡ್ರಾ ಸಾಧಿಸಿತ್ತು.







