ರಾಷ್ಟ್ರಪತಿ, ಪ್ರಧಾನಿ ಘಂಟೆ ಬಾರಿಸಿ ಜಿಎಸ್ ಟಿಗೆ ಅಧಿಕೃತ ಚಾಲನೆ
ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಜಿಎಸ್ಟಿ ಒಂದು ಐತಿಹಾಸಿಕ ಹೆಜ್ಜೆ :ರಾಷ್ಟ್ರಪತಿ ಪ್ರಣವ್ ಮುಖರ್ಜಿ

ಹೊಸದಿಲ್ಲಿ, ಜೂ.30: ಪಾರ್ಲಿಮೆಂಟ್ ನ ವಿಶೇಷ ಅಧಿವೇಶನದಲ್ಲಿ ಶುಕ್ರವಾರ ಮಧ್ಯರಾತ್ರಿ 12 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಘಂಟೆ ಬಾರಿಸಿ ಜಿಎಸ್ ಟಿಗೆ ಅಧಿಕೃತ ಚಾಲನೆ ನೀಡಿದರು. ಇದರೊಂದಿಗೆ ದೇಶಾದ್ಯಂತ ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೊಂಡಿದೆ
ಪಾರ್ಲಿಮೆಂಟ್ ನ ಸೆಂಟ್ರಲ್ ಹಾಲ್ ನಲ್ಲಿ ನಡೆದ ವಿಶೇಷ ಅಧಿವೇಶವನ್ನುದ್ದೇಶಿಸಿ ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ "ರಾಷ್ಟ್ರ ನಿರ್ಮಾಣದಲ್ಲಿ ಇದು ಮಹತ್ವದ ಕ್ಷಣ. ಕೆಲ ಸಮಯದಲ್ಲಿ ದೇಶ ಹೊಸ ವ್ಯವಸ್ಥೆಗೆ ಕಾಲಿಡಲಿದೆ. ಇದೊಂದು ಏಕಪಕ್ಷದ ಸಾಧನೆಯಲ್ಲ. ನಮ್ಮೆಲ್ಲರ ಪರಿಶ್ರಮದ ಫಲ ''ಎಂದರು.
ಜಿಎಸ್ ಟಿ ಜಾರಿಗೆ ಸೆಂಟ್ರಲ್ ಹಾಲ್ ಪವಿತ್ರ ಸ್ಥಳವಾಗಿದೆ. ಇಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.ಇಲ್ಲೇ ಹಿಂದೆ ಸಂವಿಧಾನವನ್ನು ಸ್ವೀಕರಿಸಲಾಗಿತ್ತು. 1947 ,ಆಗಸ್ಟ್ 14 ಮಧ್ಯರಾತ್ರಿ 12 ಗಂಟೆ ಸ್ವಾತಂತ್ರ್ಯ ಕ್ಕೆ ಸಾಕ್ಷಿಯಾಗಿತ್ತು. ಸಂವಿಧಾನ ದೇಶದ ಪ್ರತಿಯೊಬ್ಬನಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದೆ.125 ಕೋಟಿ ಜನರು ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಜಿಎಸ್ಟಿ ಒಂದು ಐತಿಹಾಸಿಕ ಹೆಜ್ಜೆ ಎಂದರು.
ವಿಶೇಷ ಅಧಿವೇಶನದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೆಟ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಕೇಂದ್ರ ಪ್ರಬಲವಿದ್ದಾಗ ರಾಜ್ಯ ಪ್ರಬಲವಾಗುತ್ತದೆ. ಭಾರತೀಯ ರಾಜಕೀಯವನ್ನು ಮೀರಿ ಸುಧಾರಣೆಯತ್ತ ಹೆಜ್ಜೆ ಹಾಕುತ್ತಿದೆ.ಜಿಎಸ್ ಟಿಯಿಂದ ನವ ಭಾರತ ನಿರ್ಮಾಣವಾಗಲಿದೆ ಎಂದರು.
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಭಾಷಣದ ಹೈಲೈಟ್ಸ್
*ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಜಿಎಸ್ಟಿ ಒಂದು ಐತಿಹಾಸಿಕ ಹೆಜ್ಜೆ
* ಜಿಎಸ್ ಟಿ ಯ 15 ವರ್ಷಗಳ ಪ್ರಯಾಣ ಇಂದು ತನ್ನ ಗುರಿ ತಲುಪಲಿದೆ. 2002ರ ಡಿಸೆಂಬರ್ ನಿಂದ ಪ್ರಯಾಣ ಆರಂಭವಾಗಿತ್ತು.
*ಜಿಎಸ್ ಟಿಯಿಂದ ನನಗೆ ವೈಯಕ್ತಿಕವಾಗಿ ಸಂತಸವಾಗಿದೆ.
*ಜಿಎಸ್ ಟಿ ಬಗ್ಗೆ ನನಗಿದ್ದ ನಂಬಿಕೆ ಇಂದು ನಿಜವಾಗಿದೆ.
ಮೋದಿ ಭಾಷಣದ ಹೈಲೈಟ್ಸ್
* ಜಿಎಸ್ ಟಿ ಹದಿನೆಂಟು ಸಭೆಗಳ ಬಳಿಕ ಜಾರಿಗೆ ಬರುತ್ತದೆ. ವಿಶೇಷವೆಂದರೆ ಭಗವದ್ಗೀತೆಯಲ್ಲೂ 18 ಆಧ್ಯಾಯಗಳಿವೆ
*ಬಡವರ ಹಿತದ ಬಗ್ಗೆ ಜಿಎಸ್ಟಿಯಲ್ಲಿ ಗಮನ ಹರಿಸಲಾಗಿದೆ.
*ಗಂಗಾನಗರದಿಂದ ಇಟಾ ನಗರದವರೆಗೂ ಒಂದೇ ತೆರಿಗೆ
*20 ಲಕ್ಷ ರೂ. ವರೆಗೆ ವಹಿವಾಟು ನಡೆಸುವವರಿಗೆ ತೆರಿಗೆ ಇಲ್ಲ.
*ಜಿಎಸ್ ಟಿ ಪ್ರಾಮಾಣಿಕ ವ್ಯಾಪಾರಿಗಳಿಗೆ ತೊಂದರೆ ಇಲ್ಲ
* ಜಿಎಸ್ ಟಿ ಜಾರಿಯಿಂದ ಕಪ್ಪು ಹಣಕ್ಕೆ ಕಡಿವಾಣ.
*ಕಚ್ಛಾ ಬಿಲ್ ಪಕ್ಕಾ ಬಿಲ್ ಆಟ ಇನ್ನು ಅಂತ್ಯಗೊಳ್ಳಲಿದೆ.
*ಏಕ್ ಭಾರತ್ , ಶ್ರೇಷ್ಠ ಭಾರತ್ 'ಗೆ ಉತ್ತಮ ವ್ಯವಸ್ಥೆ
*ಜಿಎಸ್ ಟಿ ವ್ಯಾಪಾರದಲ್ಲಿನ ಸಮತೋಲನೆ ಅಂತ್ಯ
*ಚೆಕ್ ಪೋಸ್ಟ್ ವ್ಯವಸ್ಥೆ ಅಂತ್ಯ
* ಜಿಎಸ್ ಟಿ ಆರ್ಥಿಕ ಸುಧಾರಣೆಯತ್ತ ಹೊಸ ವ್ಯವಸ್ಥೆ
*ಟೀಮ್ ಇಂಡಿಯಾದ ಸಾಮರ್ಥ್ಯಕ್ಕೆ ಜಿಎಸ್ಟಿ ಸಾಕ್ಷಿ
*ಜಿಎಸ್ ಟಿ ಗುಡ್ ಮತ್ತು ಸಿಂಪಲ್ ಟ್ಯಾಕ್ಸ್







