‘ಭಾರತದ ಅಥ್ಲೀಟ್ಸ್ ಜಾಗತಿಕ ಟೂರ್ನಿಯಲ್ಲಿ ಸ್ಪರ್ಧಿಸಲಿ’
ಅಂಜು ಬಾಬ್ಬಿ ಜಾರ್ಜ್

ಹೊಸದಿಲ್ಲಿ, ಜೂ.30: ಭಾರತೀಯ ಅಥ್ಲೀಟ್‌ಗಳು ಜಾಗತಿಕ ಮಟ್ಟದ ಅಥ್ಲೀಟ್ ಕೂಟಗಳಲ್ಲಿ ನಿರಂತರವಾಗಿ ಸ್ಪರ್ಧಿಸುತ್ತಿರಬೇಕು ಎಂದು ಲಾಂಗ್‌ಜಂಪ್ ದಂತಕತೆ ಅಂಜು ಬಾಬ್ಬಿ ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಹೆಚ್ಚಿನ ಅಥ್ಲೀಟ್‌ಗಳು ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಭಾಗವಹಿಸುವ ಬದಲಿಗೆ ಕೇವಲ ತರಬೇತಿಯತ್ತ ಹೆಚ್ಚು ಒತ್ತು ನೀಡುತ್ತಾರೆ. ಈಗ ಮೂಲಭೂತ ಸೌಕರ್ಯದಲ್ಲಿ ಸಾಕಷ್ಟು ಉತ್ತಮವಾಗಿದೆ. ಆದರೆ, ನಮ್ಮ ಅಥ್ಲೀಟ್‌ಗಳು ತರಬೇತಿಗಷ್ಟೇ ಗಮನ ನೀಡದೇ ಸ್ಪರ್ಧಿಸುವತ್ತಲೂ ಗಮನ ನೀಡಬೇಕು ಎಂದು 2003ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ ಏಕೈಕ ಅಥ್ಲೀಟ್ ಆಗಿರುವ ಅಂಜು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಕಠಿಣ ಶ್ರಮಪಟ್ಟು ವಿಶ್ವ ಚಾಂಪಿಯನ್‌ಶಿಪ್ ಅಥವಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಕ್ಕಷ್ಟೇ ಸೀಮಿತವಾಗಬಾರದು. ಇದು ಸರಿಯಾದ ದಾರಿಯಲ್ಲ. ಹೀಗೆ ಮಾಡುವುದರಿಂದ ಒಲಿಂಪಿಕ್ಸ್ ಅಥವಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಮಗೆ ಪದಕ ಸಿಗುವುದಿಲ್ಲ. ಅಮೆರಿಕ ಹಾಗೂ ಯುರೋಪಿನ ಅಥ್ಲೀಟ್‌ಗಳು ಇತರ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡುತ್ತಿರುತ್ತಾರೆ. ನಾವು ಕೂಡ ಅವರ ರೀತಿ ಆಗಬೇಕು. ಆ ಮೂಲಕ ಇನ್ನಷ್ಟು ಪದಕಗಳನ್ನು ಗೆಲ್ಲಬೇಕಾಗಿದೆ ಎಂದುಇ ಅಂಜು ಹೇಳಿದ್ದಾರೆ.







